ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ; ಆರೋಪಿ ಸುಧೀರ್ ರಾವ್ ಸೆರೆ

ಮಂಗಳೂರು, ಎ.6: ವಿದೇಶದಲ್ಲಿ ಉದ್ಯೋಗ, ವೀಸಾ ಕೊಡಿಸುವುದಾಗಿ ಹೇಳಿಕೊಂಡು ಹಲವು ಮಂದಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಿಜೈ ನ್ಯೂ ರೋಡ್‌ನ ಎರಡನೆ ಕ್ರಾಸ್ ರಸ್ತೆಯ ನಿವಾಸಿ ಸುಧೀರ್ ರಾವ್ ವಿ.ಆರ್.(42) ಬಂಧಿತ ಆರೋಪಿ.
ಬಲ್ಗೇರಿಯಾ ದೇಶದಲ್ಲಿ ಉದ್ಯೋಗ-ವೀಸಾ ದೊರಕಿಸಿಕೊಡುವುದಾಗಿ ಹೇಳಿಕೊಂಡು 30ಕ್ಕೂ ಅಧಿಕ ಮಂದಿಯಿಂದ 50ಲಕ್ಷ ರೂ.ಗೂ ಅಧಿಕ ಹಣ ಪಡೆದು ಬಳಿಕ ವಂಚಿಸಿರುವ ಆರೋಪ ಈತನ ಮೇಲೆ ಇದೆ. ಈ ಬಗ್ಗೆ ಮೂಡುಬಿದಿರೆ ಮತ್ತು ಬಂಟ್ವಾಳ ನಗರ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಸುಧೀರ್ ರಾವ್ ಕಾರು ಖರೀದಿಸುವ ಸಲುವಾಗಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಸೊಸೈಟಿಯಲ್ಲಿ ಅದನ್ನಿಟ್ಟು ಕಾರು ಖರೀದಿಸಿದ್ದ. ಬಳಿಕ ಕಂತು ಪಾವತಿಸದೆ ವಂಚಿಸಿದ್ದ. ಇದರಿಂದ ಜಾಮೀನು ನಿಂತವರು ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ಸುರತ್ಕಲ್‌ನಲ್ಲಿ 2, ಕದ್ರಿಯಲ್ಲಿ 2, ಕಂಕನಾಡಿ ನಗರ ಮತ್ತು ಪಾಂಡೇಶ್ವರ ಠಾಣೆಯಲ್ಲಿ ತಲಾ ಒಂದು ಸಹಿತ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು.
ಆರೋಪಿಯು ಪ್ರಕರಣ ದಾಖಲಾದ ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ಇರುವಿಕೆಯ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.