ಉಡುಪಿ: ಉದ್ಯಮಿ ಪ್ರಸಾದ್ ಕಾಂಚನ್‌ಗೆ ಒಲಿದ ಕಾಂಗ್ರೆಸ್ ಟಿಕೆಟ್

ಉಡುಪಿ, ಎ.6: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಪಟ್ಟಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಅವರ ಪುತ್ರ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಆಯ್ಕೆ ಮಾಡಿದೆ.
ಹೊಸದಿಲ್ಲಿಯಲ್ಲಿ ಪಕ್ಷ ಇಂದು ಪ್ರಕಟಿಸಿದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಉಡುಪಿ-ದಕ್ಷಿಣ ಕನ್ನಡದಿಂದ ಸ್ಥಾನ ಪಡೆದ ಏಕೈಕ ಕಾಂಗ್ರೆಸಿಗ ಪ್ರಸಾದ್ ಕಾಂಚನ್. ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಇದರೊಂದಿಗೆ ದಕ್ಷಿಣ ಕನ್ನಡದ ಮೂರು ಸ್ಥಾನಗಳಿಗೂ ಅಭ್ಯರ್ಥಿಗಳ ಹೆಸರನ್ನು ಇನ್ನಷ್ಟೇ ಪ್ರಕಟಿಸಬೇಕು. ಮೊದಲ ಪಟ್ಟಿಯಲ್ಲಿ ಉಡುಪಿಯ ಮೂರು ಹಾಗೂ ದಕ್ಷಿಣ ಕನ್ನಡ ಐದು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.
ಈಗಾಗಲೇ ಬೈಂದೂರು ಮತ್ತು ಕಾಪು ಕ್ಷೇತ್ರಗಳಿಗೆ ಇಬ್ಬರು ಬಿಲ್ಲವರಿಗೆ ಹಾಗೂ ಕುಂದಾಪುರದಲ್ಲಿ ಬಂಟ ಅಭ್ಯರ್ಥಿಗೆ ಟಿಕೆಟ್ ಕೊಟ್ಟ ಬಳಿಕ, ಜಿಲ್ಲೆಯ ಮತ್ತೊಂದು ಬಲಿಷ್ಠ ಮೊಗವೀರ ಸಮುದಾಯಕ್ಕೆ ಉಡುಪಿಯಲ್ಲಿ ಟಿಕೆಟ್ ಕೊಡುವುದು ಖಚಿತವಾಗಿತ್ತು. ಇದಕ್ಕಾಗಿ ಟಿಕೆಟಾಕಾಂಕ್ಷಿಗಳಲ್ಲಿ ಇದ್ದ ಮೊಗವೀರ ಸಮುದಾಯದ ರಮೇಶ್ ಕಾಂಚನ್, ಪ್ರಸಾದ್ ಕಾಂಚನ್ ಹಾಗೂ ದಿವಾಕರ ಕುಂದರ್ ಅವರ ನಡುವೆ ಒಬ್ಬನ ಆಯ್ಕೆ ಖಚಿತವಾಗಿತ್ತು.
ಕಾಂಗ್ರೆಸ್‌ನ ಸ್ಕೃಿನೀಂಗ್ ಸಮಿತಿ ಹಾಗೂ ಕೇಂದ್ರ ಚುನಾವಣಾ ಸಮಿತಿಗಳು ಅಳೆದು ಸುರಿದು, ಹಲವರ ಸಲಹೆ ಪಡೆದು ಸಕ್ರಿಯ ರಾಜಕೀಯದಲ್ಲಿ ಅನನುಭವಿಯಾದರೂ ಉದ್ಯಮಿ ಪ್ರಸಾದ್ ಕಾಂಚನ್‌ರಿಗೆ ಮಣೆ ಹಾಕಿತು. ಈ ಮೂಲಕ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ದಿವಾಕರ ಕುಂದರ್ ಹಾಗೂ ಉಡುಪಿ ನಗರಸಭಾ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರೀಯ ರಾಗಿರುವ ರಮೇಶ್ ಕಾಂಚನ್‌ರನ್ನು ಬದಿಗೆ ಸರಿಸಿತು.
ಪ್ರಸಾದ್ ಕಾಂಚನ್ ಪರಿಚಯ: 50ರ ಹರೆಯದ ಪ್ರಸಾದ್ ರಾಜ್ ಕಾಂಚನ್, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉದ್ಯಮಿಗಳ ಕುಟುಂಬದಿಂದ ಬಂದವರು. ಇವರ ಅಜ್ಜ (ತಾಯಿಯ ತಂದೆ) ಎಸ್.ವಿ.ಕಾಂಚನ್ ಅವರು 1970ರಲ್ಲಿ ಮಂಗಳೂರು ಮುನ್ಸಿಪಾಲಿಟಿಯ ಮೊದಲ ಕಾರ್ಪೋರೇಟರ್‌ಗಳಲ್ಲಿ ಒಬ್ಬರು. ಮುಂಬೈಯಲ್ಲಿದ್ದಾಗ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಸ್.ವಿ.ಕಾಂಚನ್, ಇದಕ್ಕಾಗಿ ಜವಾಹರಲಾಲ್ ನೆಹರೂ ಅವರೊಂದಿಗೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಪ್ರಸಾದ್‌ರ ಮತ್ತೊಬ್ಬ ಅಜ್ಜ (ತಂದೆಯ ತಂದೆ) ಲಚ್ಚ ಸಾಹುಕಾರ್, ಭಾರತ ಸ್ವಾತಂತ್ರ್ಯ ಪಡೆಯುವಾಗ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದರು. ಇದರೊಂದಿಗೆ ಅವರು ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು. ಹೀಗಾಗಿ ರಾಜಕೀಯ ಹಾಗೂ ಉದ್ಯಮಗಳಲ್ಲಿ ಪ್ರಸಾದ್ ಕಾಂಚನ್‌ಗೆ ಪಾಠ ಮನೆಯಿಂದಲೇ ಪ್ರಾರಂಭಗೊಂಡಿತ್ತು.
ಪ್ರಸಾದ್ ಕಾಂಚನ್ ಅವರ ತಂದೆ ಬಿ.ಬಿ.ಕಾಂಚನ್ ಹಾಗೂ ತಾಯಿ ಸರಳಾ ಕಾಂಚನ್. ಬಿ.ಬಿ.ಕಾಂಚನ್ ಅವರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿ ಖ್ಯಾತಿ ಪಡೆದಿದ್ದರೆ, ತಾಯಿ ಸರಳಾ ಕಾಂಚನ್ ಜಿಲ್ಲೆಯ ಸಕ್ರೀಯ ರಾಜಕಾರಣಿಯಾಗಿದ್ದು 1999 ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರು. ಅಲ್ಲದೇ ಅವರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಸಹಕಾರಿ ಕ್ಷೇತ್ರದಲ್ಲೂ ದುಡಿದ ಸರಳಾ ಕಾಂಚನ್, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋಆಪರೇಟಿವ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಅಲ್ಲದೇ ಕರ್ನಾಟಕ ರಾಜ್ಯ ಮಹಿಳಾ ಕೋಆಪರೇಟಿವ್ ಫೆಡರೇಷನ್‌ನ ಅಧ್ಯಕ್ಷೆ ಯಾಗಿಯೂ ಸೇವೆ ಸಲ್ಲಿಸಿದ್ದರು. ಹೀಗೆ ಸಮಾಜ ಸೇವೆ ಹಾಗೂ ರಾಜಕೀಯ ಆಸಕ್ತಿಯನ್ನು ಮನೆಯಲ್ಲೇ ಬೆಳೆಸಿಕೊಂಡ ಪ್ರಸಾದ್ ಕಾಂಚನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಕೆಪಿಸಿಸಿ ಬಿಲ್ಡಿಂಗ್ ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದಾರೆ.
ಪ್ರಾರಂಭಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಪ್ರಸಾದ್, ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಿಂದ ಬಿಎ ಪದವಿಯನ್ನು ಪಡೆದು, ಬೆಂಗಳೂರಿನ ಜೆಎನ್‌ಆರ್ ವಿದ್ಯಾಪೀಠದಿಂದ ಎಂಬಿಎ ಸ್ನಾತಕ ಪದವಿ ಪಡೆದರು. ಅವರೀಗ ಉಡುಪಿ, ಮಂಗಳೂರು ಹಾಗೂ ಕಾರವಾರಗಳಲ್ಲಿ ಕಾಂಚನ ಹುಂಡೈ ಶೋರೂಮ್‌ಗಳ ಮಾಲಕರು.
ಇದುವರೆಗೆ ರಾಜಕೀಯದಲ್ಲಿ ‘ಹವ್ಯಾಸಿ’ಯಂತಿದ್ದ ಪ್ರಸಾದ್ ರಾಜ್, ಇದೀಗ ಪೂರ್ಣಕಾಲಿಕ, ವೃತಿಪರ ರಾಜಕಾರಣಕ್ಕೆ ಧುಮುಕುತಿದ್ದಾರೆ. ಕಾರ್ಪೋರೇಟ್ ಮಟ್ಟದಿಂದ ‘ಜನಸಾಮಾನ್ಯ’ರ ನಡುವೆ ರಾಜಕಾರಣ ಮಾಡುವ ವಾತಾವರಣಕ್ಕೆ ಹೊಂದಿಕೊಳ್ಳುವ ಅವರ ಮನೋಧರ್ಮ ಮೇ10ರ ಚುನಾವಣೆಯಲ್ಲಿ ಅವರ ಯಶಸ್ಸನ್ನು ನಿರ್ಧರಿಸಬಹುದು.
ಕಾಂಚನ್‌ಗೆ ಟಿಕೆಟ್: ಉಡುಪಿಯಲ್ಲಿ ಅಸಮಧಾನದ ಹೊಗೆ
ಮೀನುಗಾರ ಸಮುದಾಯದ ಯುವ ಮುಖಂಡ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್‌ಗೆ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಘೋಷಣೆಯಾಗುತಿದ್ದಂತೆ ಪಕ್ಷದೊಳಗೆ ಅಸಮಧಾನದ ಹೊಗೆ ಏಳುತ್ತಿರುವ ಸೂಚನೆ ಕಂಡಬಂದಿದೆ.
ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ಎಂಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಇದು ಉಳಿದ ಆಕಾಂಕ್ಷಿಗಳಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. ಸಾಮಾನ್ಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಧಾನವನ್ನು ಹೊರ ಹಾಕುತಿದ್ದಾರೆ. ಒಂದೆರಡು ತಿಂಗಳ ಹಿಂದಿನ ವರೆಗೂ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಪ್ರಸಾದ್‌ಗೆ ಟಿಕೇಟ್ ನೀಡಿರುವುದು ಕಾರ್ಯಕರ್ತರು ಹಾಗೂ ಮುಖಂಡರ ಮುನಿಸಿಗೆ ಕಾರಣವಾಗಿದೆ.