ಅಮೆರಿಕ ಅಧಿಕಾರಿ ಜತೆ ತೈವಾನ್ ಅಧ್ಯಕ್ಷೆ ಸಭೆ: ಚೀನಾ ಆಕ್ರೋಶ; ತೈವಾನ್ ಬಳಿ ಯುದ್ಧವಿಮಾನ ನಿಯೋಜನೆ

ಬೀಜಿಂಗ್, ಎ.6: ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್ ಹಾಗೂ ಅಮೆರಿಕ ಸಂಸತ್ತಿನ ಸ್ಪೀಕರ್ ಕೆವಿನ್ ಮೆಕಾರ್ಥಿ ನಡುವೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಭೆಯನ್ನು ಖಂಡಿಸಿರುವ ಚೀನಾ, ಈ ಮಾತುಕತೆ ಗಂಭೀರ ಪ್ರಮಾದವಾಗಿದೆ ಅಪಾಯಕಾರಿಯಾಗಿದೆ. ಇದು ದೃಢ ಮತ್ತು ಪರಿಣಾಮಕಾರಿ ಪ್ರತಿಕ್ರಮಗಳಿಗೆ ಕಾರಣವಾಗಲಿದೆ ಎಂದಿದೆ.
ಮೆಕಾರ್ಥಿ ನೇತೃತ್ವದ ಅಮೆರಿಕದ ನಿಯೋಗ ಹಾಗೂ ತ್ಸಾಯ್ ಇಂಗ್ವೆನ್ ನೇತೃತ್ವದ ತೈವಾನ್ ನಿಯೋಗದ ನಡುವಿನ ಸಭೆಯಲ್ಲಿ `ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ತೈವಾನ್ ಗೆ ಶಸ್ತ್ರಾಸ್ತ್ರ ಪೂರೈಕೆ ತ್ವರಿತಗೊಳಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ' ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ಸ್ವ-ಆಡಳಿತ ವ್ಯವಸ್ಥೆಯಿರುವ ತೈವಾನ್ನ ಅಧ್ಯಕ್ಷೆ ಹಾಗೂ ಅಮೆರಿಕ ಸಂಸತ್ತಿನ ಸ್ಪೀಕರ್ ನಡುವಿನ ಉನ್ನತ ಮಟ್ಟದ ಮಾತುಕತೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚೀನಾದ ವಿದೇಶಾಂಗ ಇಲಾಖೆ `ಇದು ತಥಾಕಥಿತ ತೈವಾನ್ ಸ್ವಾತಂತ್ರ್ಯ ಪಡೆಗಳ ಒಳಸಂಚು ಆಗಿದೆ. ತೈವಾನ್ ಪ್ರಶ್ನೆಯು ಚೀನಾದ ಪ್ರಮುಖ ಹಿತಾಸಕ್ತಿಗಳ ಕೇಂದ್ರಸ್ಥಾನದಲ್ಲಿದೆ ಮತ್ತು ಅಮೆರಿಕ-ಚೀನಾ ನಡುವಿನ ಸಂಬಂಧದಲ್ಲಿ ದಾಟಬಾರದ ಮೊದಲ ಕೆಂಪುಗೆರೆಯಾಗಿದೆ' ಎಂದಿದೆ.
ಅಮೆರಿಕ ಮತ್ತು ತೈವಾನ್ ನಡುವಿನ ಒಳಸಂಚಿನ ಭಾಗವಾಗಿರುವ ಈ ಉಪಕ್ರಮಕ್ಕೆ ಪ್ರತಿಯಾಗಿ ಚೀನಾವು ತನ್ನ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ದೃಢ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿಕೆ ತಿಳಿಸಿದ್ದು ತೈವಾನ್ ಜತೆಗಿನ ಎಲ್ಲಾ ಅಧಿಕೃತ ಸಂವಹನವನ್ನು ನಿಲ್ಲಿಸುವಂತೆ ಮತ್ತು ತಪ್ಪಾದ ಹಾಗೂ ಅಪಾಯಕಾರಿ ರಸ್ತೆಯಲ್ಲಿ ಇನ್ನಷ್ಟು ಮುಂದೆ ಸಾಗದಂತೆ ಅಮೆರಿಕವನ್ನು ಆಗ್ರಹಿಸುವುದಾಗಿ ಚೀನಾ ಹೇಳಿದೆ.