ಐಪಿಎಲ್: ಆರ್‌ಸಿಬಿ ಗೆಲುವಿಗೆ 205 ರನ್ ಗುರಿ ನೀಡಿದ ಕೆಕೆಆರ್
ಶಾರ್ದೂಲ್ ಠಾಕೂರ್, ಗುರ್ಬಾಝ್ ಅರ್ಧಶತಕ

ಕೋಲ್ಕತಾ, ಎ.6: ಶಾರ್ದೂಲ್ ಠಾಕೂರ್(68 ರನ್, 29 ಎಸೆತ) ಹಾಗೂ ರಹಮಾನುಲ್ಲಾ ಗುರ್ಬಾಝ್(57 ರನ್, 44 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿದೆ.
ಗುರುವಾರ ಐಪಿಎಲ್‌ನ 9ನೇ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ವೆಂಕಟೇಶ್ ಅಯ್ಯರ್(3 ರನ್), ಮನ್‌ದೀಪ್ ಸಿಂಗ್(0), ನಿತೀಶ್ ರಾಣಾ(1ರನ್)ವಿಕೆಟ್‌ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡ ಕೆಕೆಆರ್ ಕಳಪೆ ಆರಂಭ ಪಡೆದಿತ್ತು. ಆಗ 4ನೇ ವಿಕೆಟಿಗೆ 42 ರನ್ ಜೊತೆಯಾಟ ನಡೆಸಿದ ಗುರ್ಬಾಝ್ ಹಾಗೂ ರಿಂಕು ಸಿಂಗ್(46 ರನ್, 33 ಎಸೆತ) ಇನಿಂಗ್ಸ್ ರಿಪೇರಿ ಮಾಡಿದರು. ಗುರ್ಬಾಝ್ ಅರ್ಧಶತಕ ಗಳಿಸಿದ ಸ್ವಲ್ಪ ಹೊತ್ತಿನಲ್ಲೇ ಔಟಾದರು.
ಆಗ ಕ್ರೀಸ್‌ಗೆ ಇಳಿದ ಆ್ಯಂಡ್ರೆ ರಸೆಲ್(0) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ 6ನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ ಶಾರ್ದೂಲ್ ಠಾಕೂರ್ ಹಾಗೂ ರಿಂಕು ಸಿಂಗ್ ತಂಡದ ಮೊತ್ತವನ್ನು ಹಿಗ್ಗಿಸಿದರು.
ಆರ್‌ಸಿಬಿ ಪರ ಡೇವಿಡ್ ವಿಲ್ಲಿ(2-16) ಹಾಗೂ ಕರ್ಣ್ ಶರ್ಮಾ(2-26)ತಲಾ ಎರಡು ವಿಕೆಟ್‌ಗಳನ್ನು ಪಡೆದರು.





