ಹಾಸನ | ವೃದ್ಧೆಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಯ ಬಂಧನ
ಹಾಸನ: 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವ ಪ್ರಕರಣದಲ್ಲಿ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಈ ಕುರಿತು ಮಾಹಿತಿ ನೀಡಿದರು.
'32 ವರ್ಷದ ಮಿಥುನ್ ಕುಮಾರ್ ಬಂಧಿತ ವ್ಯಕ್ತಿಯಾಗಿದ್ದು, ಈತ ಅರಸೀಕೆರೆ ತಾಲೂಕಿನ ಯರೆಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಮಿಥುನ್ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ' ಎಂದು ತಿಳಿಸಿದರು.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದ ವೃದ್ಧೆಯು ಎಪ್ರಿಲ್ 1ರಂದು ತನ್ನ ಜಮೀನನ ಬಳಿ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದಿ ತಿಳಿಸಿದರು.
'ತಾಯಿ ಮನೆಗೆ ಬಂದಿಲ್ಲ ಎಂದು ಎಪ್ರಿಲ್ 2 ರಂದು ವೃದ್ಧೆ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯರೆಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ವೃದ್ಧೆ ಮೃತದೇಹ ಪತ್ತೆಯಾಗಿದೆ. ಅನುಮಾನಸ್ಪದ ಸಾವು ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ' ಎಂದು ವಿವರಿಸಿದರು.