ಮಾಜಿ ಶಾಸಕ ಜೆ.ಆರ್. ಲೋಬೊಗೆ ಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ ಟಿಕೆಟ್ ?

ಮಂಗಳೂರು, ಎ.6: ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ನ ಎರಡನೇ ಹಂತದ ಪಟ್ಟಿ ಪ್ರಕಟಗೊಂಡಿದ್ದು, ದ.ಕ. ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ. ಹೀಗಿದ್ದರೂ ಮಂಗಳೂರು ನಗರ ದಕ್ಷಿಣದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತದೆ.
ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಇನ್ನೂ ಪ್ರಕಟಿಸಿಲ್ಲ.
ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ನ ಮೇಲೆ ಘಟಾನುಘಟಿಗಳು ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ದಕ್ಷಿಣ ಕನ್ನಡದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿತ್ತು. ಆದರೆ ಒಮ್ಮತ ಮೂಡದ ಕಾರಣದಿಂದಾಗಿ ಉಳಿದ ಮೂರು ಕ್ಷೇತ್ರಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
ಬಿಜೆಪಿ ಮೊದಲ ಪಟ್ಟಿಯನ್ನೇ ಈವರೆಗೆ ಬಿಡುಗಡೆಗೊಳಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ದ.ಕ.ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯ ಆಯ್ಕೆಯು ಕಠಿಣವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಘೋಷಣೆ ಮುಂದೂಡಲ್ಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೊದಲ ಪಟ್ಟಿ ಬಿಡುಗಡೆಗೊಂಡಾಗ ಸುಳ್ಯ ವಿಧಾನ ಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಬೇರೆ ಎಲ್ಲಿಯೂ ಭಿನ್ನಮತಿ ಕಾಣಿಸಿಕೊಂಡಿರಲಿಲ್ಲ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಇನ್ನೋರ್ವ ಆಕಾಂಕ್ಷಿ ನಂದಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹೋರಾಟ ಆರಂಭಿಸಿದ್ದಾರೆ.
ಮೂರು ಕ್ಷೇತ್ರಗಳಲ್ಲೂ ಜಾತಿ ಪ್ರಭಾವ ಇದ್ದೇ ಇದೆ. ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೆ ಮಂಗಳೂರು ದಕ್ಷಿಣ ಕ್ರೈಸ್ತ ಸಮುದಾಯವರಿಗೆ, ಮಂಗಳೂರು ಉತ್ತರ ಮುಸ್ಲಿಮ್ ಮತ್ತು ಪುತ್ತೂರು ಬಂಟ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‌ನ ಟಿಕೆಟ್ ನೀಡಲಾಗುತ್ತಿತ್ತು.
ಈ ಮೂರು ಕ್ಷೇತ್ರಗಳಲ್ಲೂ ಸ್ಪರ್ಧೆ ಇದೆ. ಮಂಗಳೂರು ಉತ್ತರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಮಾಜಿ ಶಾಸಕ ಮೊಯ್ದಿನ್ ಬಾವ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನಾಯತ್ ಅಲಿ ಮೊದಲ ಬಾರಿ ಅದೃಷ್ಠ ಪರೀಕ್ಷೆ ನಡೆಸುವ ಅವಕಾಶಕ್ಕಾಗಿ ಭಾರೀ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಮೊಯ್ದಿನ್ ಬಾವ ಎರಡನೇ ಯತ್ನದಲ್ಲಿ ವಿಧಾನ ಸಭೆ ಪ್ರವೇಶಿಸಿದ್ದರು. ಆದರೆ ಕಳೆದ ಬಾರಿ ಸೋಲು ಅನುಭವಿಸಿದ್ದರು.
ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ ಟಿಕೆಟ್‌ಗಾಗಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಈ ನಡುವೆ ಬಿಲ್ಲವ ಸಮುದಾಯದ ಧುರೀಣ ಪದ್ಮರಾಜ್ ಕೂಡಾ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪದ್ಮರಾಜ್ ದಿಲ್ಲಿಯಲ್ಲಿದ್ದುಕೊಂಡು ಪ್ರಯತ್ನ ಮುಂದುವರಿಸಿದ್ದಾರೆ. ವಕೀಲರಾದ ಪದ್ಮರಾಜ್ ಕಾಂಗ್ರೆಸ್‌ನ ಸದಸ್ಯತ್ವ ಪಡೆದಿಲ್ಲ. ಟಿಕೆಟ್‌ಗೆ ಅರ್ಜಿಯೂ ಹಾಕಿಲ್ಲ. ಆದರೆ ಪ್ರಯತ್ನ ಮುಂದುವರಿಸಿದ್ದಾರೆ. ಈ ನಡುವೆ ಉತ್ತರ ಕನ್ನಡದ ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಅವರು ಕುಮಟಾ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರದಾದ್ಯಂತ ಓಡಾಡಿಕೊಂಡು ಜನರ ಒಲವು ಗಳಿಸುತ್ತಿದ್ದಾರೆ. ನಿವೇದಿತ್ ಕೈಗೆ ಕುಮಟಾ ಕ್ಷೇತ್ರ ಸಿಕ್ಕಿದರೆ ಮಂಗಳೂರು ನಗರ ದಕ್ಷಿಣದಲ್ಲಿ ಬದಲಾವಣೆಯಾಗಬಹುದೆಂಬ ಎಂಬ ಲೆಕ್ಕಚಾರ ಇತ್ತು ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪುತ್ತೂರು ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಅಶೋಕ್ ಕುಮಾರ್ ರೈ, ಹೇಮನಾಥ್ ಶೆಟ್ಟಿ ಸೇರಿದಂತೆ 10ಕ್ಕೂ ಅಧಿಕ ಮಂದಿ ಟಿಕೆಟ್‌ನ ರೇಸಿನಲ್ಲಿದ್ದಾರೆ. ಗೌಡ ಸಮುದಾಯದ ಅಭ್ಯರ್ಥಿಗೆ ಪುತ್ತೂರಿನಲ್ಲಿ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಈ ಸಮುದಾಯದ ಹಲವು ಮಂದಿ ನಾಯಕರು ಪ್ರತಿ ಬಾರಿಯೂ ಚುನಾವಣೆ ಬಂದಾಗಲೂ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಾರೆ . ಆದರೆ ಅವರಿಗೆ ಟಿಕೆಟ್ ಕೈ ತಪ್ಪುತ್ತದೆ.
ಜಿಲ್ಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ನ್ನು ರಕ್ಷಿತಾ ಶಿವರಾಂ ಪಡೆದಿದ್ದಾರೆ. ಇಬ್ಬರು ಎಂಎಲ್‌ಸಿಗಳು ಬಿಲ್ಲವ ಸಮುದಾಯದವರು ಇದ್ದಾರೆ. ಅವರೆಂದರೆ ರಾಜ್ಯ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್. ಇಬ್ಬರಿಗೆ ಎಂಎಲ್‌ಸಿ ಸಿಕ್ಕಿರುವ ಕಾರಣದಿಂದಾಗಿ ಬಿಲ್ಲವ ಸಮುದಾಯದ ಮುಖಂಡರಿಗೆ ಇನ್ನೊಂದು ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಸವಾಲು ಎದುರಿಸುವಂತಾಗಿದೆ.
ಬಂಟ ಸಮುದಾಯದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಬಂಟ್ವಾಳದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಮೂಡಬಿದ್ರೆಯಲ್ಲಿ ಮಿಥುನ್ ರೈಗೆ ಸಿಕ್ಕಿದೆ. ಮಿಥುನ್ ರೈ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬರುವ ವಿಧಾನ ಸಭಾ ಚುನಾವಣೆಗೆ ಪುತ್ತೂರಿನಲ್ಲಿ ಬಂಟ ಸಮುದಾಯದ ನಾಯಕರಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಇದೇ ಸಮುದಾಯಕ್ಕೆ ಸೇರಿರುವ ಡಾ. ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.







