ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ವಿದ್ಯಾರ್ಥಿಗಳ ಶಿಕ್ಷೆ ಹಿಂಪಡೆಯುವಂತೆ 59 ಶಿಕ್ಷಣ ತಜ್ಞರಿಂದ ದಿಲ್ಲಿ ವಿವಿಗೆ ಮನವಿ

ಹೊಸದಿಲ್ಲಿ, ಎ. 5: ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ ಎಂದು ಹೇಳಲಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷೆಯನ್ನು ಹಿಂಪಡೆಯುವಂತೆ 59 ಮಂದಿ ಶಿಕ್ಷಣ ತಜ್ಞರ ಗುಂಪು ಗುರುವಾರ ದಿಲ್ಲಿ ವಿಶ್ವವಿದ್ಯಾನಿಲಯದ ಆಡಳಿತವನ್ನು ಆಗ್ರಹಿಸಿದೆ.
ದಿಲ್ಲಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೋಗೇಶ್ ಸಿಂಗ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಶಿಕ್ಷಣ ತಜ್ಞರು, ದೇಶದಲ್ಲಿ ಸಾಕ್ಷ್ಯಚಿತ್ರವನ್ನು ಅಧಿಕೃತವಾಗಿ ನಿಷೇಧಿಸದೇ ಇರುವುದರಿಂದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದ್ದಾರೆ.
ಭಾರತ ಸರಕಾರದಿಂದ ಮೇಲೆ ಹೇಳಲಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಕ್ಕೆ ವಿಧಿಸಿದ ನಿಷೇಧವನ್ನು ಉಲ್ಲಂಘಿಸಲಾಗಿದೆ ಎಂದು ಪ್ರತಿಪಾದಿಸಿ ವಿದ್ಯಾರ್ಥಿಗಳಿಗೆ ವಿಧಿಸಿದ ಶಿಕ್ಷೆಯನ್ನು ಪ್ರಶ್ನಿಸಿ ಈ ಮನವಿ ಸಲ್ಲಿಸಲಾಗಿದೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
ಈ ಸಾಕ್ಷಚಿತ್ರವನ್ನು ಎಂದೂ ನಿಷೇಧಿಸಿರಲಿಲ್ಲ ಹಾಗೂ ಈಗ ಕೂಡ ಕೇಂದ್ರ ಸರಕಾರ ನಿಷೇಧಿಸಿಲ್ಲ. ಇದು ಎಲ್ಲರಿಗೂ ತಿಳಿದಿದೆ ಎಂಬುದನ್ನು ನಾವು ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಮನವಿಗೆ ಅಪೂರ್ವಾನಂದ, ಸತೀಶ್ ದೇಶಪಾಂಡೆ, ನಂದಿನಿ ಸುಂದರ್, ಇರಾ ರಾಜಾ ಸೇರಿದಂತೆ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಸುಚರಿತಾ ಸೇನ್, ವಿಶ್ವಭಾರತಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸುದೀಪ್ತಾ ಭಟ್ಟಚಾರ್ಯ ಹಾಗೂ ಇತರರು ಸಹಿ ಹಾಕಿದ್ದಾರೆ.







