ಶಾಲೆಗಳಲ್ಲಿ ಶೇ.15ಕ್ಕಿಂತ ಹೆಚ್ಚುವರಿ ಶುಲ್ಕ ವಿಧಿಸಿದರೆ ಕ್ರಮ: ಖಾಸಗಿ ಶಾಲಾ ಸಂಘಟನೆಗಳು ಎಚ್ಚರಿಕೆ

ಬೆಂಗಳೂರು, ಎ.6: ಖಾಸಗಿ ಶಾಲೆಗಳ ಶುಲ್ಕ ನಿಗಧಿ ವಿಚಾರವಾಗಿ ಹೈಕೋರ್ಟ್‍ನ ತೀರ್ಪು ನಮಗೆ ಸಂತೋಷವನ್ನು ತಂದರೂ, ತೀರ್ಪನ್ನು ದುರುಪಯೋಗಪಡಿಸಿಕೊಂಡು ಕೆಲ ಖಾಸಗಿ ಶಾಲೆಗಳು ಶೇ.40ರಷ್ಟು ಶುಲ್ಕವನ್ನು ಏರಿಕೆ ಮಾಡಿವೆ ಎಂದು ಖಾಸಗಿ ಶಾಲಾ ಸಂಘನೆಗಳು ಕಳವಳ ವ್ಯಕ್ತಪಡಿಸಿವೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಕಾಮ್ಸ್‍ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, ರಾಜ್ಯ ಸರಕಾರವೇ ಪಠ್ಯಪುಸ್ತಕಗಳಿಗೆ ಶುಲ್ಕವನ್ನು ಹೆಚ್ಚಳಮಾಡಿರುವಾಗ, ಖಾಸಗಿ ಶಾಲೆಗಳು ಖರ್ಚು-ವೆಚ್ಚಗಳಿಗೆ ಅನುಗುಣವಾಗಿ ಶೇ.15ರಷ್ಟು ಶುಲ್ಕವನ್ನು ಹೆಚ್ಚಳ ಮಾಡುವಲ್ಲಿ ತಪ್ಪಿಲ್ಲ. ಆದರೆ ಏಕಾಏಕಿ ಕೆಲ ಖಾಸಗಿ ಶಾಲೆಗಳು ಶೇ.40ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿವೆ. ಇಂತಹ ಶಾಲೆಗಳ ಪಟ್ಟಿಯೊಂದಿಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದರು.
ಖಾಸಗಿ ಶಾಲೆಗಳ ಶುಲ್ಕ ನಿಗಧಿ ವಿಚಾರವಾಗಿ ಸಂಘಟನೆಗಳು ಅನಿವಾರ್ಯವಾಗಿ ಹೈಕೋರ್ಟ್‍ಗೆ ಹೋಗಿದ್ದವು. ಸುಪ್ರೀಂ ತೀರ್ಪಿನ ಅನ್ವಯವೇ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ರಾಜ್ಯ ಸರಕಾರವು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಸುಪ್ರಿಂ ಕೋರ್ಟ್‍ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದೆ. ಸರಕಾರವು ಮೇಲ್ಮನವಿಯನ್ನು ಸಲ್ಲಿಸುವುದರ ಬದಲಾಗಿ ಖಾಸಗಿ ಶಾಲೆಗಳೊಂದಿಗೆ ಸಭೆಯನ್ನು ನಡೆಸಬೇಕಾಗಿತ್ತು ಎಂದು ಅವರು ಮನವಿ ಮಾಡಿದರು.
ಖಾಸಗಿ ಶಾಲೆಗಳ ವಿರುದ್ದ ದೂರನ್ನು ದಾಖಲಿಸಿದ ತಕ್ಷಣ ಶಿಕ್ಷಣ ಇಲಾಖೆಯು ನೇರವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು. ಶಿಕ್ಷಣ ಇಲಾಖೆಯು ಹಾಗೆ ಮಾಡದೆ, ಖಾಸಗಿ ಶಾಲೆಗಳ ವಿರುದ್ಧ ದೂರು ಬಂದರೆ ಶಿಕ್ಷಣ ಇಲಾಕೆಯು ನೊಟೀಸ್ ಜಾರಿ ಮಾಡುತ್ತದೆ. ಇದನ್ನು ಇಟ್ಟುಕೊಂಡು ಮಕ್ಕಳ ಹಿತಾಸಕ್ತಿಯ ನೆಪದಲ್ಲಿ ಕೋರ್ಟ್‍ನಲ್ಲಿ ಖಾಸಗಿ ಶಾಲೆಗಳು ತಡೆಯಾಜ್ಞೆಯನ್ನು ತರುತ್ತಿವೆ. ಖಾಸಗಿ ಶಾಲೆಗಳಿಗೆ ಸಾರ್ವಜನಿಕರಲ್ಲಿ ಕೆಟ್ಟ ಹೆಸರು ಬರುವಂತೆ ನಡೆಸಿಕೊಳ್ಳು ಶಿಕ್ಷಣ ಇಲಾಕೆಯು ನೋಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಶೇ.40ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿರುವ ಶಾಲೆಗಳನ್ನು ಪಟ್ಟಿಯನ್ನು ನೀಡುವಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಶಾಲೆಗಳ ಪಟ್ಟಿಯನ್ನು ನಿಮಗೆ ನೀಡುವುದಿಲ್ಲ. ಇಲಾಖೆಗೆ ದೂರು ಪ್ರತಿಯೊಂದಿಗೆ ಸಲ್ಲಿಸಿದ್ದೇವೆ. ಹಾಗೆಯೇ ಶಾಲೆಗಳಲಿ ಶುಲ್ಕವನ್ನು ಶೇ.15ಕ್ಕಿಂತ ಹೆಚ್ಚು ಮಾಡಿದರೆ, ಪೋಷಕರು ಶಿಕ್ಷಣ ಇಲಾಖೆಗೆ ಅಥವಾ ನಮ್ಮ ಸಂಘಟನೆಗೆ ದೂರನ್ನು ನೀಡಲಿ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳ ಪದಾಧಿಕಾರಿಗಳಾದ ಶ್ರೀನಿವಾಸ್, ಇಕ್ಬಾಲ್, ಗಾಯತ್ರಿದೇವಿ, ಸತ್ಯನಾರಾಯಣ ಮತ್ತಿತರರು ಉಪಸ್ಥಿತಿ ಇದ್ದರು.







