ತಾರಾ ಪ್ರಚಾರಕರು ಅಭಿನಯಿಸುವ ಸಿನೆಮಾ ಪ್ರದರ್ಶನಕ್ಕೆ ನಿರ್ಬಂಧವಿಲ್ಲ: ಚುನಾವಣಾಧಿಕಾರಿ
ಇ-ಪತ್ರಿಕೆಯಲ್ಲಿ ಜಾಹೀರಾತಿಗೆ ಪೂರ್ವಾನುಮತಿ ಅಗತ್ಯ

ಬೆಂಗಳೂರು, ಎ.6: 'ನೀತಿ ಸಂಹಿತೆ ಜಾರಿಗೂ ಮುನ್ನ ಜಾರಿಯಲ್ಲಿರುವ ಕಾನೂನಡಿ ನೂರು ಕೋಟಿಗೂ ಹೆಚ್ಚು ಮೌಲ್ಯದಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಾರಾ ಪ್ರಚಾರಕರು ಅಭಿನಯಿಸುವ ವಾಣಿಜ್ಯ ಉದ್ದೇಶದ ಚಲನಚಿತ್ರ ಪ್ರದರ್ಶನಕ್ಕೆ ನಿರ್ಬಂಧವಿಲ್ಲ. ಆದರೆ ರಾಜಕೀಯ ರೀತಿಯ ವಿಚಾರವಿದ್ದರೆ ಪ್ರದರ್ಶನಕ್ಕೆ ಅವಕಾಶವಿಲ್ಲ' ಎಂದು ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಸಷ್ಟಪಡಿಸಿದ್ದಾರೆ.
ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ವಿಧಾನಸಭೆಯ ಚುನಾವಣೆ ಕುರಿತ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಎಫ್‍ಐಆರ್ ದಾಖಲಿಸಬಹುದು. ಅಧಿಕಾರದಲ್ಲಿರುವ ಪಕ್ಷ ಮತದಾರರ ಮೇಲೆ ಪರಿಣಾಮ ಬೀರುವಂತಹ ಯೋಜನೆಗಳು, ಹೊಸ ಕಾರ್ಯಕ್ರಮಗಳನ್ನು ಮಾಡಬಾರದು. ಹೊಸ ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮಾಡಬಾರದು. ಸಭೆ ಕರೆಯುವಂತಿಲ್ಲ. ಪಕ್ಷಗಳು ವೈಯಕ್ತಿಕ ನಿಂದನೆ ಮಾಡಬಾರದು. ಅಧಿಕಾರಿಗಳು ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಬಾರದು. ಪ್ರೊಟೊಕಾಲ್, ಸಭೆಗಳಲ್ಲಿ ಭಾಗವಹಿಸಬಾರದು ಎಂದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಾಹಿರಾತು ನೀಡುವ ರಾಜಕೀಯ ಪಕ್ಷ, ರಾಜಕೀಯ ವ್ಯಕ್ತಿಗಳು ಪೂರ್ವಾನುಮತಿ ಪಡೆಯಬೇಕು. ವರ್ಷವಿಡೀ ಪ್ರಕಟ ಮಾಡುವ ರಾಜಕೀಯ ಪ್ರೇರಿತ ಜಾಹೀರಾತಿಗೂ ಇದು ಅನ್ವಯವಾಗುತ್ತದೆ. ಈ ಜಾಹಿರಾತಿನಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಯಾವುದೇ ಉಲ್ಲೇಖವಿರಬಾರದು. ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿ ಪರ ಅಥವಾ ವಿರುದ್ಧವಾಗಿ ಪ್ರಕಟವಾಗುವ ಸುದ್ದಿಗಳು ಸುಳ್ಳುಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ‘ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ವಿಧಾನಸಭಾ ಚುನಾವಣಾ ಮಾಹಿತಿ ಪ್ರಕಟಿಸುವ ವೇಳೆ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವುದರ ಜೊತೆಗೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದ್ದಾರೆ.
‘ಚುನಾವಣೆಯಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದ್ದು, ಮಾಧ್ಯಮದವರು ಚುನಾವಣೆಯಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎನ್ನುವುದರ ಕುರಿತು ಅರಿವು ಮೂಡಿಸಲು ಈ ಕಾರ್ಯಾಗಾರ ನಡೆಸಲಾಗಿದೆ ಎಂದರು.
ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟ ಮಾಡುವ ಮುನ್ನ ಎಂಸಿ ಅಂಡ್ ಎ ಕಮಿಟಿಯ ಪೂರ್ವ ಪ್ರಮಾಣಿಕರಣ ಪಡೆದಿರಬೇಕು. ಮುದ್ರಣ ಮಾಧ್ಯಮಕ್ಕೆ ಮತದಾನದ ಮುಂಚಿನ 48 ಗಂಟೆಗಳ ಅವಗೆ ಅನ್ವಯವಾಗಲಿದೆ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.
ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಸೂರ್ಯಸೇನ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗವು ನಿಗಾ ಇಟ್ಟಿದ್ದು, ಜಾಹೀರಾತುಗಳನ್ನು ಪೂರ್ವಾನುಮತಿ ಪಡೆದು ಪ್ರಸಾರ ಮಾಡಬೇಕೆಂದರು ಎಂದರು. ಕಾರ್ಯಾಗಾರದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಗೋಷ್, ವಾರ್ತಾ ಇಲಾಖೆಯ ನಿರ್ದೇಶಕ ಡಿ.ಪಿ.ಮುರಳೀಧರ್ ಉಪಸ್ಥಿತರಿದ್ದರು.
ಇ-ಪತ್ರಿಕೆಯಲ್ಲಿ ಜಾಹೀರಾತಿಗೆ ಪೂರ್ವಾನುಮತಿ ಅಗತ್ಯ: ‘ಮುದ್ರಣ ಮಾಧ್ಯಮದ ಇ-ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅಗತ್ಯ. ರಾಜಕೀಯಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿನ ಅಂಶಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿಯಿಂದ ಪ್ರಮಾಣಿಕರಿಸಿದ ಜಾಹೀರಾತನ್ನು ಪ್ರಕಟಿಸಬೇಕು ಹಾಗೂ ವಿಡಿಯೊ ವ್ಯಾನ್ ಪ್ರಚಾರಕ್ಕೆ ಪ್ರಮಾಣ ಪತ್ರ ಪಡೆಯುವುದು ಅಗತ್ಯ. ಎಂಸಿಅಂಡ್‍ಎ ಅನುಮತಿ ಇರುವ ಸರ್ಟಿಫಿಕೇಟ್ ಇಲ್ಲದಿದ್ದರೆ ಪ್ರಕಟ ಮಾಡಿದ್ದ ಮಾಧ್ಯಮದವರು ಜವಾಬ್ದಾರರಾಗುತ್ತಾರೆ’
-ವೆಂಕಟೇಶ್ ಕುಮಾರ್, ಅಪರ ಮುಖ್ಯ ಚುನಾವಣಾಧಿಕಾರಿ