ಭಾರತದಲ್ಲಿ ಇನ್ನು ಟೋಲ್ ಪ್ಲಾಝಾಗಳು ಇರುವುದಿಲ್ಲವಂತೆ!
ಟೋಲ್ಗತೆ ನೀಳ್ಗತೆ

►► ಸರಣಿ 1
ಭಾರತದಾದ್ಯಂತ ಟೋಲ್ ಗೇಟ್‌ಗಳು ಮತ್ತು ಅಲ್ಲಿನ ಲೂಟಿಗಳು ಸದ್ದು ಮಾಡುತ್ತಿವೆ. ಮಂಗಳೂರಿನಲ್ಲಿ ತಿಂಗಳುಗಳ ತನಕ ನಡೆದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಹೋರಾಟ, ಮೈಸೂರಿನಲ್ಲಿ ಮನಸೋಇಚ್ಛೆ ಟೋಲ್ ದರದ ವಿರುದ್ಧ ಹೋರಾಟ ಹೀಗೆ ಜನಸಾಮಾನ್ಯರು ನಿಧಾನವಾಗಿ ಟೋಲ್ ಲೂಟಿಯ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಆದರೆ ಹೆಚ್ಚಿನವರಿಗೆ ಯಾಕೆ ಹೀಗೆ ರಸ್ತೆ ಸುಂಕ ಹಠಾತ್ತಾಗಿ ಮೈಮೇಲೆ ಬಂದು ಎರಗಿದೆ ಎಂಬುದು ಅರ್ಥವಾಗಿಲ್ಲ. ಈ ಮಹಾಖಾಸಗೀಕರಣ ಹಲವು ಚುಕ್ಕಿಗಳ ಚಿತ್ರ. ಪ್ರಭುತ್ವ ಅಲ್ಲಲ್ಲಿ ಹಾಕುತ್ತಾ ಬಂದಿರುವ ಹಲವು ಚುಕ್ಕಿಗಳನ್ನು ಜೋಡಿಸಿದಾಗ ಪೂರ್ಣ ಚಿತ್ರ ಅರ್ಥಾತ್ ಮಹಾಖಾಸಗೀಕರಣದ ವಿಶ್ವರೂಪ ಕಾಣಿಸುವ ಕಥೆ.
ಈ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು ಒಂದು ಹೇಳಿಕೆ ನೀಡಿದ್ದನ್ನು ನೀವು ಗಮನಿಸಿರಬಹುದು. ಇನ್ನು ಆರು ತಿಂಗಳುಗಳಲ್ಲಿ, ಭಾರತದ ರಸ್ತೆಗಳಲ್ಲಿ ಟೋಲ್ ಪ್ಲಾಝಾಗಳನ್ನು ನಿವಾರಿಸುವ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ! ಎಂಬ ಹೇಳಿಕೆ ಅದು. ಹಾಗೆಂದ ಮಾತ್ರಕ್ಕೆ ಅವರು ಟೋಲ್ ವಸೂಲಿ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಬದಲಾಗಿ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ತಂತ್ರಜ್ಞಾನವನ್ನು ಬಳಸಿಕೊಂಡು, ಯಾರು ಎಷ್ಟು ಪ್ರಮಾಣದಲ್ಲಿ ರಸ್ತೆ ಬಳಸುತ್ತಾರೋ, ಅವರಿಂದ ಅಷ್ಟೇ ಪ್ರಮಾಣದಲ್ಲಿ ರಸ್ತೆ ಸುಂಕ ವಸೂಲಿ ಮಾಡುವ ಮೂಲಕ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಂದರೆ, ಇಲ್ಲಿಯ ತನಕ ಟೋಲ್ ಸಂಗ್ರಹದಲ್ಲಿ ಅನ್ಯಾಯ ನಡೆದಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದಾಯಿತು. ಹಾಗಾಗಿ ಅವರು ಸುಧಾರಣೆಗಳಿಗೆ ಕೈ ಹಾಕಿದ್ದಾರೆ. ಇದು ಒಂದು ಚುಕ್ಕಿ.
ಎರಡನೇ ಚುಕ್ಕಿ ಎಂದರೆ, 2021ರ ಸೆಪ್ಟಂಬರಿನಲ್ಲಿ, ಕೋವಿಡ್ ಗದ್ದಲದ ನಡುವೆಯೇ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿದ್ದ ಒಂದು ಘೋಷಣೆ ನಿಮಗೆ ಕೇಳಿಸಿರಲಿಕ್ಕಿಲ್ಲ. ‘‘ಏಕ್ ಭಾರತ್- ಏಕ್ ರಿಜಿಸ್ಟ್ರೇಷನ್’’ ಎಂಬ ಘೋಷಣೆ ಅದು. ವಿಷಯ ಏನಪ್ಪಾಅಂದರೆ, 28 ರಾಜ್ಯಗಳು, ಎಂಟು ಕೇಂದ್ರಾಡಳಿತ ಪ್ರದೇಶಗಳು ಇರುವ ಮಹಾ ಒಕ್ಕೂಟವಾದ ಭಾರತದಲ್ಲಿ, ಪ್ರತೀ ರಾಜ್ಯ ಪ್ರತ್ಯೇಕವಾದ ವಾಹನ ನೋಂದಣಿ ವ್ಯವಸ್ಥೆ ಹೊಂದಿದೆ. ಅವನ್ನೆಲ್ಲ ಒಂದು ಸೂತ್ರಕ್ಕೆ ತರದೆ ಒಂದು ನಿಯಮದಡಿ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಅಖಿಲಭಾರತ ಮಾನ್ಯತೆಯ ಬಿಎಚ್ ಸೀರೀಸನ್ನು ಭಾರತ ಸರಕಾರ ಆರಂಭಿಸಿದೆ. ಈ ಭಾರತ್ ಸೀರೀಸ್ ನಂಬರನ್ನು ಹೊಂದಿರದ ವಾಹನಗಳು ರಾಜ್ಯದಿಂದ ರಾಜ್ಯಕ್ಕೆ ಸ್ಥಳಾಂತರಗೊಳ್ಳುವಾಗ ಈವತ್ತಿನ ಸ್ಥಿತಿಯಲ್ಲಿ ಆಯಾರಾಜ್ಯಗಳ ರಸ್ತೆ ತೆರಿಗೆ ಮತ್ತಿತರ ಹಲವು ಕಾನೂನಿನ ಅವಶ್ಯಕತೆಗಳನ್ನು ಪೂರೈಸಬೇಕಿರುತ್ತದೆ. ಅದು ದುಬಾರಿ. ಜನರ ಈ ತೊಂದರೆಯನ್ನು ಭಾರತ್ ಸೀರೀಸ್ ನಿವಾರಿಸಲಿದೆ ಎಂಬುದು ಸರಕಾರದ ಭರವಸೆ. ಮೊದಲಿಗೆ ಉನ್ನತ ಸರಕಾರಿ ಅಧಿಕಾರಿಗಳಿಗೆ ಮತ್ತು ನಾಲ್ಕು ರಾಜ್ಯಗಳಿಗಿಂತ ಹೆಚ್ಚು ಕಡೆಗಳಲ್ಲಿ ಶಾಖಾ ಕಚೇರಿಗಳನ್ನು ಹೊಂದಿರುವ ಕಾರ್ಪೊರೇಟ್ ಖಾಸಗಿಯವರಿಗೆ ಮಾತ್ರ ಭಾರತ್ ಸೀರೀಸ್ ನಂಬರ್ ಪಡೆಯಲು ಅವಕಾಶ ಇದ್ದದ್ದನ್ನು ಈಗ ಯಾವುದೇ ಖಾಸಗಿ ವಾಹನಗಳವರು ಪಡೆಯಬಹುದು ಎಂದು ಸಡಿಲು ಮಾಡಲಾಗಿದೆ. ದೇಶದಲ್ಲಿ ಈಗಾಗಲೇ 20,000ಕ್ಕೂ ಮಿಕ್ಕಿ ಭಾರತ್ ಸೀರೀಸ್ ನಂಬರ್‌ಪ್ಲೇಟ್ ಹೊಂದಿರುವ ವಾಹನಗಳಿವೆ ಎಂದು ಕೇಂದ್ರ ಸರಕಾರದ ವೆಬ್‌ಸೈಟ್ ಹೇಳುತ್ತದೆ. ಶೀಘ್ರವೇ ಭಾರತದ ಎಲ್ಲ ವಾಹನಗಳಿಗೂ ಭಾರತ್ ಸೀರೀಸ್ ಕಡ್ಡಾಯ ಆಗಬಹುದು.
ಮೂರನೇ ಚುಕ್ಕಿ ಏನೆಂದರೆ, ಎಎನ್‌ಪಿಆರ್ ತಂತ್ರಜ್ಞಾನ. ಅರ್ಥಾತ್, ಸ್ವಯಂಚಾಲಿತವಾಗಿ ನಂಬರ್ ಪ್ಲೇಟ್ ಗುರುತಿಸುವ ತಂತ್ರಜ್ಞಾನ. ಈಗಾಗಲೇ ದೇಶದ ಹೆದ್ದಾರಿ ಟೋಲ್‌ಗೇಟ್‌ಗಳಲ್ಲಿ ಚಾಲ್ತಿ ಇರುವ ಈ ತಂತ್ರಜ್ಞಾನಕ್ಕೆ ದೇಶದಾದ್ಯಂತ ‘‘ಒಂದು ನೋಂದಣಿ’’ ವ್ಯವಸ್ಥೆ ಬಂದಾಗ ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ನಂಬರ್‌ಪ್ಲೇಟನ್ನು ಗುರುತಿಸಲು ಆ ವಿಶೇಷ ಕ್ಯಾಮರಾಗಳಿಗೆ ಸಾಧ್ಯವಾಗುತ್ತದೆ.
ನಾಲ್ಕನೆಯ ಚುಕ್ಕಿ ಏನೆಂದರೆ, ದೇಶದಲ್ಲಿ ವಾಹನಗಳ ಉತ್ಪಾದಕರಿಗೆ ಜಿಪಿಎಸ್ ಪರಿಕರವನ್ನು ವಾಹನಗಳಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸುವುದು. ಈಗಾಗಲೇ ಹಲವು ಬಗೆಯ ವಾಹನಗಳಲ್ಲಿ (ಬಹುತೇಕ ಎಲ್ಲ ದುಬಾರಿ ವಾಹನಗಳಲ್ಲಿ) ಇದು ಆಚರಣೆಗೆ ಬಂದಾಗಿದೆ. ಅದು ಕಡ್ಡಾಯವಾಗುವುದು ಮಾತ್ರ ಬಾಕಿ ಇದೆ.
ಈಗ ಈ ನಾಲ್ಕು ಚುಕ್ಕಿಗಳನ್ನು ಜೋಡಿಸಿ, ಒಂದು ಭಾಗಶಃ ಚಿತ್ರವನ್ನು ಪಡೆಯೋಣ. ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ನೆಡಲಾಗಿರುವ ವಿಶೇಷ ಕ್ಯಾಮರಾಗಳು ನಂಬರ್ ಪ್ಲೇಟ್‌ಗಳನ್ನು ಗುರುತಿಸಿ, ಅದರ ವಿವರಗಳನ್ನು ಸೆಂಟ್ರಲ್ ಡೇಟಾಬೇಸ್ ಒಂದಕ್ಕೆ ಕಳುಹಿಸಿದರೆ, ಇನ್ನೊಂದೆಡೆ ಜಿಪಿಎಸ್ ವ್ಯವಸ್ಥೆಯ ಮೂಲಕ ದೇಶದ ಪ್ರತಿಯೊಂದು ವಾಹನ ಎಲ್ಲಿಂದ ಎಲ್ಲಿಗೆ ತೆರಳುತ್ತಿದೆ ಎಂಬುದನ್ನು ಗುರುತಿಸಿ, ಆ ವಾಹನ ಚಲಿಸಿದ ದೂರಕ್ಕೆ ಕಿಲೋಮೀಟರ್ ಒಂದರ ಇಂತಿಷ್ಟು ಹಣವನ್ನು ರಸ್ತೆ ಬಳಕೆ ಶುಲ್ಕವಾಗಿ, ವಾಹನದಲ್ಲೇ ಅಳವಡಿಸಲಾಗಿರುವ ಫಾಸ್ಟ್‌ಟ್ಯಾಗ್‌ನಂತಹ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ವಸೂಲಿ ಮಾಡಿಕೊಳ್ಳುವುದಕ್ಕೆ ತಂತ್ರಜ್ಞಾನದ ಸಿದ್ಧತೆ ನಡೆಯುತ್ತಿರುವಂತಿದೆ!
ದೇಶದ ಜನತೆ ಸುಗಮವಾಗಿ ಚಲಿಸುವುದು ಎಷ್ಟು ಮುಖ್ಯ ಎಂಬುದನ್ನು ಅರಿತಿರುವ ಸಾರಿಗೆ ಸಚಿವರು, ಇತ್ತೀಚೆಗೆ ಅದು ಎಷ್ಟು ಸುಗಮ ಎಂಬುದನ್ನೂ ವಿವರಿಸಿದ್ದಾರೆ. ಭಾರತದಲ್ಲಿ ಟೋಲ್ ಗೇಟುಗಳು ಆರಂಭವಾದ ದಿನಗಳಲ್ಲಿ ಒಂದು ಟೋಲ್‌ಗೇಟಿನಲ್ಲಿ ಸುಂಕ ತೆರಲು ಒಂದು ವಾಹನ ಸರಾಸರಿ ಎಂಟು ನಿಮಿಷಗಳ ಕಾಲ ಕಾಯಬೇಕಿತ್ತಂತೆ. 2016ರಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಮತ್ತು ಅದು 2021ರಲ್ಲಿ ಕಡ್ಡಾಯವಾದ ಬಳಿಕ, ಈ ಟೋಲ್ ಗೇಟುಗಳಲ್ಲಿ ಕಾಯುವ ಅವಧಿ ಹಂತಹಂತವಾಗಿ ಇಳಿದು, ಈಗ 47 ಸೆಕೆಂಡುಗಳಿಗೆ ತಲುಪಿದೆಯಂತೆ! ಅದೂ ಸಾಕಾಗುವುದಿಲ್ಲ ಎಂದು ಈಗ ಟೋಲ್ ಗೇಟನ್ನೇ ತೆಗೆದು ಸ್ವಯಂಚಾಲಿತ ಮತ್ತು ನ್ಯಾಯಬದ್ಧವಾದ ಸುಂಕ ವಸೂಲಿ ನಡೆಯಲಿದೆ, ಯಾರೂ ಎಲ್ಲೂ ಕಾಯಬೇಕಾಗಿಲ್ಲ ಎಂದು ಸಾರಿಗೆ ಸಚಿವಾಲಯ ಭರವಸೆ ನೀಡಿದೆ.
ಸುಂಕ ತೆತ್ತು ಸುಗಮವಾಗಿ, ನಿರಾತಂಕದಿಂದ ಚಲಿಸಿ!







