ರೌಡಿಶೀಟರ್ ಫಯಾಝ್ ಜೊತೆಗೆ ವಿಧಾನಸಭಾಧ್ಯಕ್ಷ ಕಾಗೇರಿ ಗುಪ್ತ ಸಭೆ: ಫೋಟೋ ವೈರಲ್

ಶಿರಸಿ: ಸ್ಥಳೀಯ ರೌಡಿಶೀಟರ್ ಜೊತೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿರುವ ಗುಪ್ತ ಸಭೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಗೇರಿ ಅವರು ರೌಡಿ ಶೀಟರ್ ಜೊತೆಗೆ ಯಾವ ವಿಚಾರವಾಗಿ ಸಭೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಶಿರಸಿಯ ರೌಡಿ ಶೀಟರ್ ಫಯಾಝ್ ಚೌಟಿ ಅಲಿಯಾಸ್ ಪಯ್ಯು ಹಾಗೂ ಬೆಂಬಲಿಗರೊಂದಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಗುಪ್ತವಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಸಭೆಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿದೆ.
ಫಯಾಝ್ ಚೌಟಿ ವಿರುದ್ಧ ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅಲ್ಲದೆ, ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕ ಭೂಗತ ಲೋಕದ ವ್ಯಕ್ತಿಗಳ ಜೊತೆ ಫಯಾಝ್‌ಗ ಸಂಪರ್ಕವಿದೆ ಎನ್ನಲಾಗಿದೆ.
ಇಂತಹ ರೌಡಿಶೀಟರ್ ತನ್ನ 50 ಕ್ಕೂ ಅಧಿಕ ಬೆಂಬಲಿಗರೊಂದಿಗೆ ಕಾಗೇರಿ ಕಛೇರಿಗೆ ಭೇಟಿ ಕೊಟ್ಟು ಗುಪ್ತ ಸಭೆ ನಡೆಸಿದ್ದಾನೆ. ಬಿಡುಗಡೆಯಾಗಿರುವ ಚಿತ್ರದಲ್ಲಿ ಫಯಾಝ್ ಕಾಗೇರಿ ಪಕ್ಕದಲ್ಲೇ ಕುಳಿತಿರುವುದು ಕಂಡು ಬಂದಿದೆ.





