ತಂದೆ ಜೊತೆ ಯಾವುದೇ ವೈರತ್ವವಿಲ್ಲ: ಎಕೆ ಆ್ಯಂಟನಿ ಪುತ್ರ ಅನಿಲ್ ಸ್ಪಷ್ಟನೆ

ತಿರುವನಂತಪುರಂ: ಸ್ವತಃ ತಂದೆ ಹಾಗೂ ಹಿರಿಯ ಕಾಂಗ್ರೆಸ್ (Congress) ನಾಯಕರಾದ ಎ.ಕೆ. ಆ್ಯಂಟನಿಯವರೇ ತಮ್ಮ ಪುತ್ರನ ಬಿಜೆಪಿ (BJP) ಸೇರ್ಪಡೆಯಾಗುವ ನಿರ್ಧಾರವನ್ನು ಟೀಕಿಸಿದ್ದರೂ, "ಈ ನಡೆಯ ಹಿಂದೆ ಯಾವುದೇ ವೈಯಕ್ತಿಕ ವೈರತ್ವ ಅಡಗಿಲ್ಲ" ಎಂದು ಅನಿಲ್ ಆ್ಯಂಟನಿ CNN-News18 ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪುತ್ರನ ಬಿಜೆಪಿ ಸೇರ್ಪಡೆಯಾಗುವ ನಿರ್ಧಾರದಿಂದ ನನಗೆ ತೀವ್ರ ನೋವಾಗಿದೆ ಮತ್ತು ನನ್ನ ಕೊನೆಯುಸಿರು ಇರುವವರೆಗೂ ಕಾಂಗ್ರೆಸ್ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ ಎಂಬ ಎ.ಕೆ. ಆ್ಯಂಟನಿಯವರ ಹೇಳಿಕೆಯ ಬೆನ್ನಿಗೇ ಅನಿಲ್ ಆ್ಯಂಟನಿ ಈ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅನಿಲ್ ಅ್ಯಂಟನಿ, "ಇದು ವೈಯಕ್ತಿಕ ವೈರತ್ವದ್ದಲ್ಲ; ಬದಲಿಗೆ ವೈಯಕ್ತಿಕ ಯೋಜನೆಯದ್ದು. ಸದ್ಯ ಕಾಂಗ್ರೆಸ್ ಪಕ್ಷವು ಇಬ್ಬರು ಮೂವರು ವ್ಯಕ್ತಿಗಳ ಹಿತಾಸಕ್ತಿಯನ್ನು ದೇಶದ ಹಿತಾಸಕ್ತಿಗಿಂತ ಮುಖ್ಯವಾಗಿಸಿಕೊಂಡಿದೆ. ಆದರೆ, ಬಿಜೆಪಿ ಪಕ್ಷವು ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವ ಸ್ಪಷ್ಟ ದೂರದೃಷ್ಟಿ ಹೊಂದಿದೆ" ಎಂದು ತಿಳಿಸಿದ್ದಾರೆ.





