ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಶೇ. 41 ರಷ್ಟು ಏರಿಕೆ ಕಂಡ ಪರಿಶಿಷ್ಟರ ವಿರುದ್ಧದ ಅಪರಾಧ ಪ್ರಕರಣಗಳು: ವರದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಶೇ.41ರಷ್ಟು ಏರಿಕೆಯಾಗಿದೆ. ಈ ಏರಿಕೆ 2018-2022 ಅವಧಿಯಲ್ಲಿ ದಾಖಲಾಗಿದೆ. ಪರಿಶಿಷ್ಟರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಇರುವ ಹೊರತಾಗಿಯೂ ಅಪರಾಧಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು The New Indian Express ವರದಿ ಮಾಡಿದೆ.
ಆದರೆ ಈ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದೇ ಅಪರಾಧಗಳ ಸಂಖ್ಯೆ ಏರಿಕೆಯಾಗಲು ಕಾರಣ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಇಲಾಖೆಯಿಂದ ದೊರೆತ ಅಂಕಿಅಂಶಗಳ ಪ್ರಕಾರ 2018ರಲ್ಲಿ ಪರಿಶಿಷ್ಟರ ವಿರುದ್ಧದ 1,523 ಅಪರಾಧ ಪ್ರಕರಣಗಳು ವರದಿಯಾಗಿದ್ದರೆ 2019ರಲ್ಲಿ ಪ್ರಕರಣಗಳ ಸಂಖ್ಯೆ 1,585 ಆಗಿತ್ತು. ಮುಂದೆ 2020ರಲ್ಲಿ 1,691 ಪ್ರಕರಣಗಳು, 2021ರಲ್ಲಿ 1,744 ಹಾಗೂ 2022ರಲ್ಲಿ 2,167 ಪ್ರಕರಣಗಳು ದಾಖಲಾಗಿವೆ.
ಪರಿಶಿಷ್ಟ ಜಾತಿ, ಪಂಗಡಗಳ ಮಹಿಳೆಯರ 130 ಅತ್ಯಾಚಾರ ಪ್ರಕರಣಗಳು 2018ರಲ್ಲಿ ವರದಿಯಾಗಿದ್ದವು. 2019ರಲ್ಲಿ ಈ ಸಂಖ್ಯೆ 210ಗೆ ಏರಿಕೆಯಾಗಿತ್ತು ಹಾಗೂ 2020ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 153 ಆಗಿದೆ. 2021ರಲ್ಲಿ 188 ಹಾಗೂ 2022ರಲ್ಲಿ 222 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಫೆಬ್ರವರಿ 28ರ ತನಕ 28 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೆ ಉಳಿದ ಅಪರಾಧ ಪ್ರಕರಣಗಳ ಸಂಖ್ಯೆ 299 ಆಗಿದೆ ಎಂದು ವರದಿಯಾಗಿದೆ.







