ಮೇ 29ರಿಂದ ಶಾಲೆ ಆರಂಭ, ಅ.8ರಿಂದ ದಸರಾ ರಜೆ
2023-24ನೇ ಶೈಕ್ಷಣಿಕ ವರ್ಷದ ವೇಳಾ ಪಟ್ಟಿ ಪ್ರಕಟ

ಬೆಂಗಳೂರು, ಎ.6: ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಸರಕಾರವು 2023-24ನೆ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 29ರಂದು ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿವೆ.
ಪ್ರಸಕ್ತ ವರ್ಷದಲ್ಲಿ ಮೇ 29ರಿಂದ ಅ.7ರವೆರೆಗೆ ಶಾಲಾ ತರಗತಿಗಳು ನಡೆಯಲಿವೆ. ಅ.8ರಿಂದ ಅ.24ವರೆಗೆ ದಸರಾ ರಜೆಗಳು ಇರಲಿದ್ದು, ಅ.25ರಿಂದ ಎರಡನೆಯ ಅವಧಿಗೆ ಶಾಲೆಗಳು ಆರಂಭವಾಗುತ್ತವೆ. ಬೇಸಿಗೆ ರಜೆಗಳು 2024ರ ಎ.10ರಿಂದ ಆರಂಭವಾಗಿ ಮೇ 28ಕ್ಕೆ ಅಂತ್ಯವಾಗುತ್ತವೆ ಎಂದು ಇಲಾಖೆಯು ವೇಳಾಪಟ್ಟಿಯಲ್ಲಿ ತಿಳಿಸಿವೆ.
ಪ್ರಸಕ್ತ ವರ್ಷದ 365 ದಿನಗಳ ಪೈಕಿ 121 ರಜೆ ದಿನಗಳಾಗಿದ್ದು, 244 ದಿನಗಳ ಶಾಲಾ ಕರ್ತವ್ಯದ ದಿನಗಳಾಗಿರುತ್ತವೆ. ಈ ಶಾಲಾ ಕರ್ತವ್ಯ ದಿನಗಳಲ್ಲಿ 26 ದಿನಗಳು ಪರೀಕ್ಷೆ ಮತ್ತು ಮೌಲ್ಯಂಕನ ಕಾರ್ಯಕ್ಕೆ ಬಳಕೆಯಾದರೆ, ಪಠ್ಯೇತರ ಚಟುವಟಿಕೆಗಳಿಗೆ 24 ದಿನಗಳು ಹಾಗೂ ಮೌಲ್ಯಮಾಪನಾ ಹಾಗೂ ಫಲಿತಾಂಶ ವಿಶ್ಲೇಷಣೆಗೆ 10ದಿನಗಳು ಬಳಕೆಯಾಗುತ್ತದೆ. 4 ದಿನಗಳು ಸ್ಥಳೀಯ ರಜೆಗೆಳಿಗೆ ಮೀಸಲಿರಿಸಿದರೆ, ಭೋದನೆ-ಕಲಿಕೆಗೆ ಕೇವಲ 180 ದಿನಗಳು ಮಾತ್ರ ಉಳಿಯಲಿವೆ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ.
ಎ.10ರಂದೇ ಎಲ್ಲ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಗಳನ್ನು ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದ್ದು, ಸಮವಸ್ತ್ರ ಧರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗೆ ಹಾಜರಾಗಬೇಕು. ಇನ್ನು ಬೇಸಿಗೆ ರಜೆ ಬರುವ ಕಾರಣ ಶಾಲಾ ದಾಸ್ತಾನು ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು. ಮೇ 10ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ಶಾಲೆಗಳನ್ನು ಮತಗಟ್ಟೆ ಕೇಂದ್ರಗಳಾಗಿ ಬಳಸಿಕೊಳ್ಳುವುದರಿಂದ ಸಹಕರಿಸಬೇಕು ಎಂದು ಸೂಚಿಸಿದೆ.
ಎ.10ರಂದು 2022-23ನೇ ಶೈಕ್ಷಣಿಕ ವರ್ಷ ಮುಕ್ತಾಯವಾಗುತ್ತಿದ್ದು, 1 ರಿಂದ 9ನೆ ತರಗತಿಗಳ ಫಲಿತಾಂಶವನ್ನು ಇಂದು(ಎ.8) ಪ್ರಕಟಿಸಲಾಗುತ್ತದೆ. ಇಂದು(ಎ.8)ರಂದು ಪ್ರೌಢಶಾಲಾ ವಿಭಾಗದಲ್ಲಿ ಹಾಗೂ ಎ.10ರಂದು ಪ್ರಾಥಮಿಕ ಶಾಲಾ ಹಂತದಲ್ಲಿ ಸಮುದಾಯ ದತ್ತ ಶಾಲೆ ಮತ್ತು ಪೋಷಕರ ಸಭೆ ನಡೆಯಲಿದೆ. ಎ.14ರಂದು ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚಾರಿಸಬೇಕು ಎಂದು ಇಲಾಖೆ ತಿಳಿಸಿದೆ.
ಕ್ರಿಸ್‍ಮಸ್‍ಗೆ ಪರಿಶೀಲಿಸಿ ರಜೆ ನೀಡಲು ಸೂಚನೆ:
ಕ್ರಿಸ್‍ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲ ಉಪನಿರ್ದೇಶಕರಿಗೆ ಸಲ್ಲಿಸಿದ್ದಲ್ಲಿ, ಅವರು ಅದನ್ನು ಪರಿಶೀಲಿಸಿ ನಿರ್ಧರಿಸಬೇಕು. ಹಾಗೆಯೇ ಡಿಸೆಂಬರ್‍ನಲ್ಲಿ ನೀಡುವ ಕ್ರಿಸ್‍ಮಸ್ ರಜೆ ಅವಧಿಯನ್ನು ಅಕ್ಟೋಬರ್‍ನ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯು 2023-24ನೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದೆ.







