ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ಭಾವನಾತ್ಮಕ ಪತ್ರ ಬರೆದು ಅಭಿಮಾನಿಗಳ ಸಭೆ ಕರೆದ ವೈಎಸ್‍ವಿ ದತ್ತ

ಚಿಕ್ಕಮಗಳೂರು, ಎ.7: ಜಿಲ್ಲೆಯ ಕಡೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್‍ನ ನಿರೀಕ್ಷೆಯಲ್ಲಿದ್ದ ವೈಎಸ್‍ವಿ ದತ್ತ ಅವರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿರುವ ಅವರು ತಮ್ಮ ಅಭಿಮಾನಿಗಳು, ಕಾರ್ಯಕರ್ತರಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದಿರುವುದು ನನ್ನ ಹಾಗೂ ಅಭಿಮಾನಿಗಳ ಸ್ವಾಭಿಮಾನಕ್ಕೆ ಆದ ಅಪಮಾನವಾಗಿದೆ. ಈ ಸಂಬಂಧ ಅಭಿಮಾನಿಗಳೊಂದಿಗೆ ಚರ್ಚಿಸಲು ರವಿವಾರದ ಸಭೆಗೆ ಆಗಮಿಸಬೇಕೆಂದು ಅವರು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
2013ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ವೈಎಸ್‍ವಿ ದತ್ತ 2018ರ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದು ಸೋಲುಕಂಡಿದ್ದರು. ಆ ಬಳಿಕ ರಾಜಕೀಯವಾಗಿ ಮೂಲೆಗುಂಪಾಗಿದ್ದ ಅವರು ರಾಜಕೀಯ ಸನ್ಯಾಸ ಪಡೆಯುವ ಮನದಿಂಗಿತ ಹೊರಹಾಕಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಇತ್ತೀಚೆಗೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರಿಗೆ ಕಡೂರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದರು.
ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ 7 ಮಂದಿ ಅರ್ಜಿ ಸಲ್ಲಿಸಿದ್ದರೂ ಟಿಕೆಟ್‍ಗೆ ಅರ್ಜಿ ಸಲ್ಲಿಸದ ವೈಎಸ್‍ವಿ ದತ್ತ ಅವರಿಗೇ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಕಾರಣಕ್ಕೆ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳೂ ಮುನಿಸಿಕೊಂಡಿದ್ದು, ವಲಸಿಗರಿಗೆ ಟಿಕೆಟ್ ನೀಡದೇ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿತ್ತು. ಗುರುವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೆ.ಎಸ್.ಆನಂದ್ ಅವರಿಗೆ ಟಿಕೆಟ್ ನೀಡುವ ಮೂಲಕ ವೈಎಸ್‍ವಿ ದತ್ತ ಅವರಿಗೆ ಪಕ್ಷದ ವರಿಷ್ಠರು ಕೈಕೊಟ್ಟಿದ್ದರು.
ವೈಎಸ್‍ವಿ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ದತ್ತ ಅಭಿಮಾನಿಗಳು ಕಾಂಗ್ರೆಸ್ ವರಿಷ್ಠರು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ವೈಎಸ್‍ವಿ ದತ್ತಾ ಅವರೂ ಬೇಸರಗೊಂಡಿದ್ದು, ಶುಕ್ರವಾರ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿರುವ ಅವರು, ಟಿಕೆಟ್ ನೀಡದಿರುವುದು ನನ್ನ ಹಾಗೂ ಅಭಿಮಾನಿಗಳ ಆತ್ಮಗೌರವ, ಸ್ವಾಭಿಮಾನಕ್ಕಾದ ಅಪಮಾನವಾಗಿದೆ. ನನ್ನ ಬಳಿ ಜಾತಿ, ಹಣ ಬಲ ಇಲ್ಲದಿದ್ದರೂ ಪ್ರೀತಿಯಿಂದ ದತ್ತಣ್ಣ ಎಂದು ಕರೆದಿದ್ದೀರಿ. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಪ್ರಸಕ್ತ ರಾಜಕೀಯದ ಸಂದರ್ಭದಲ್ಲಿ ಒಬ್ಬರ ಜೊತೆಗೆ ಒಬ್ಬರಿರಲೇಬೇಕು. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕು ಎಂದು ದತ್ತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವೈಎಸ್‍ವಿ ದತ್ತ ಅವರ ಮನೆ ಬಳಿ ಅಭಿಮಾನಿಗಳು ನೆರೆದಿದ್ದು, ಮತ್ತೆ ಜೆಡಿಎಸ್ ಸೇರುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಅಲ್ಲದೇ ಜೆಡಿಎಸ್ ಮುಖಂಡರೂ ಕೂಡ ದತ್ತ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಕಡೂರು ಪಟ್ಟಣದಲ್ಲಿ ರವಿವಾರ ಬೆಳಗ್ಗೆ 11ಕ್ಕೆ ವೈಎಸ್‍ವಿ ದತ್ತಾ ಅಭಿಮಾನಿಗಳ ಸಭೆ ಕರೆದಿದ್ದು, ಸಭೆಯಲ್ಲಿ ವೈಎಸ್‍ವಿ ದತ್ತ ಅವರ ಮುಂದಿನ ಹಾದಿ ಬಗ್ಗೆ ತೀರ್ಮಾನ ಆಗುವ ನಿರೀಕ್ಷೆ ಇದೆ.








