ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್‍ಐಆರ್

ಬೆಂಗಳೂರು, ಎ.7: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ ನಡೆಸಿದ ಆರೋಪದಡಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಎ.2ರಂದು ಇಲ್ಲಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ್ದ ಶಾಸಕ ರೇಣುಕಾಚಾರ್ಯ, ಕಾರ್ಯಕರ್ತರು ಜಮಾವಣೆಗೊಂಡು ಸಭೆ ನಡೆಸುತ್ತಿದ್ದರು. ಈ ವೇಳೆ ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು ಶಾಸಕರ ಭಾಷಣದ ವೇಳೆ ಮೈಕ್ ಕಸಿದು ಕಾರ್ಯಕ್ರಮಕ್ಕೆ ತಡೆಹಾಕಿದ್ದರು.
ಬಳಿಕ ಪರಿಶೀಲನೆ ವೇಳೆ ಸಂತೋಷ್ ಎಂಬುವವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಭಿಕರಿಗೆ ಊಟದ ವ್ಯವಸ್ಥೆ ಸಹ ಮಾಡಿರುವುದು ಪತ್ತೆಯಾಗಿತ್ತು. ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಚುನಾವಣಾಧಿಕಾರಿ ವಿಜಯ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ರೇಣುಕಾಚಾರ್ಯ, ಕಾರ್ಯಕ್ರಮ ಆಯೋಜಕ ಸಂತೋಷ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.
Next Story