ಅಮುಲ್ ಉತ್ಪನ್ನಗಳ ಖರೀದಿ ಜನರ ಆಯ್ಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು, ಎ.7: ರಾಜ್ಯದಲ್ಲಿ ಆನ್‍ಲೈನ್ ಮೂಲಕ ಅಮುಲ್ ಸಂಸ್ಥೆಯ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಖರೀದಿ ಮಾಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ, ಅದು ಮತ್ತಷ್ಟು ಬೆಳೆಯಬೇಕು ಎನ್ನುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದರು.
ಆದರೆ, ಅಮುಲ್ ಸಂಸ್ಥೆ ಆನ್‍ಲೈನ್ ಮೂಲಕ ಹಾಲು ಮತ್ತು ಮೊಸದೇ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ. ಆದರೆ, ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಮಾರುಕಟ್ಟೆಗೆ ಅಮೂಲ್ ಪ್ರವೇಶ: ನಂದಿನಿ ಶವಪೆಟ್ಟಿಗೆಗೆ ಮತ್ತೊಂದು ಮೊಳೆ ಎಂದ ನೆಟ್ಟಿಗರು
ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಈಗ ನೀಡಿರುವ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ವರ್ಷಕ್ಕೆ ಒಂದು ಲಕ್ಷ ಕೋಟಿ ರೂ.ಬೇಕು. ರಾಜ್ಯದ ಬಜೆಟ್ ಇರುವುದೆ ಮೂರು ಲಕ್ಷ ಕೋಟಿ ರೂ.ಗಳು. ಅದರಲ್ಲಿ ನಾಲ್ಕು ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವೆ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಬಿಪಿಎಲ್ ಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ. ರಾಜಸ್ಥಾನದಲ್ಲಿ ಇದೇ ರೀತಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಉಡುಪಿ ಜಿಲ್ಲೆಯಲ್ಲಿ ಅಕ್ಕಿ ಬಳಸುವುದಿಲ್ಲ, ಅಲ್ಲಿ ಅಕ್ಕಿ ನೀಡಿದರೆ ಕಾಳಸಂತೆಗೆ ಹೋಗುತ್ತದೆ. ಆಯಾ ಭಾಗದಲ್ಲಿ ಜನರು ಬಳಸುವ ಪದಾರ್ಥಗಳನ್ನೆ ಪಡಿತರ ಮೂಲಕ ನೀಡಬೇಕು ಎಂದು ಅವರು ಹೇಳಿದರು.
ಪಿಎಂ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದಲ್ಲಿ ನರೇಂದ್ರ ಮೋದಿ ಸರಕಾರ ಸುಮಾರು ಎರಡು ಲಕ್ಷ ಕೋಟಿ ರೂ.ಖರ್ಚು ಮಾಡಿ 80 ಕೋಟಿ ಜನರಿಗೆ ಅಕ್ಕಿ, ಗೋಧಿ, ರಾಗಿಯನ್ನು ನೀಡುವ ಕೆಲಸ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿಯೂ 1.17 ಕೋಟಿ ಜನ ಅಕ್ಕಿ ಮತ್ತು ರಾಗಿ ಪಡೆಯುತ್ತಿದ್ದಾರೆ. ಅಂತ್ಯೋದಯ ಯೋಜನೆಯಲ್ಲಿ 10.50 ಲಕ್ಷ ಕುಟುಂಬಕ್ಕೆ ನೆರವು ನೀಡಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಶ್ರೇಯಸ್ಸು ಪಡೆಯುವ ಸಿದ್ದರಾಮಯ್ಯ, ಆ ಯೋಜನೆಗೆ ಶೇ.90ರಷ್ಟು ಹಣವನ್ನು ಕೇಂದ್ರ ಸರಕಾರ ನೀಡಿದ್ದನ್ನು ಮಾತ್ರ ಹೇಳುವುದಿಲ್ಲ. ಪೌಷ್ಟಿಕಾಂಶ ಕೊರತೆ ಇರುವ ಹಿಂದುಳಿದ ಜಿಲ್ಲೆಗಳಲ್ಲಿ ಅಕ್ಕಿ ಜೊತೆ ಪ್ರೊಟೀನ್ ನೀಡುವ ಕೆಲಸ ಮಾಡುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಈ ಪ್ರಯೋಗ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.