ಕರ್ನಾಟಕ ರಾಜ್ಯ ಮೊಗೇರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಮೊಗೇರ ಜಾತಿ ಸೇರಿ ದಂತೆ 89 ಉಪಜಾತಿಗಳಿಗೆ ಕೇವಲ 1 ಶೇಕಡಾ ಮೀಸಲಾತಿಯನ್ನು ಪ್ರಕಟಿಸಿ ವಂಚಿಸಿದೆ. ಸರಕಾರದ ಈ ಧೋರಣೆಯನ್ನು ಖಂಡಿಸಿ ಮೊಗೇರ ಸಮಾಜವು ರಾಜ್ಯಾದ್ಯಂತ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷ ಸುಂದರ ಮೇರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಪರಿಶಿಷ್ಟ ಜಾತಿಗಳ ವಿವಿಧ ಉಪಜಾತಿಗಳಿಗೆ 1 ಶೇಕಡಾ ಒಳ ಮೀಸಲಾತಿಯನ್ನು ನೀಡಿ ಜಾತಿಗಳ ಮಧ್ಯೆ ಒಡಕನ್ನು ಸೃಷ್ಟಿಸಿದೆ. ಈ ಹಿಂದೆ ನೀಡಿದ ಮೀಸಲಾತಿಯಲ್ಲಿ ಯಾವುದೇ ಕೊರತೆಗಳಿರಲಿಲ್ಲ. ಸರಕಾರದ ದಲಿತ ವಿರೋಧಿ ನಡೆಯಿಂದ ಮುಂದಿನ ಪೀಳಿಗೆಯು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ವಂಚಿತರಾಗಬಹುದು. ಒಳ ಮೀಸಲಾತಿಯ ಆದೇಶವನ್ನು ರದ್ದುಪಡಿಸಿ, ಹಿಂದಿನ ಮೀಸಲಾತಿಯನ್ನು ಮರು ಜಾರಿಗೊಳಿಸುವಂತೆ ಅಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ಉಪಾಧ್ಯಕ್ಷ ಸದಾನಂದ ಉಳ್ಳಾಲ್, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಪ್ಪ ಬೋಂದೆಲ್, ತಾಲೂಕು ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್ ಹಾಗೂ ದಲಿತ ಮುಖಂಡ ಅಶೋಕ್ ಕೊಂಚಾಡಿ ಉಪಸ್ಥಿತರಿದ್ದರು.