ವರ ದಲಿತ ಎಂದು ಮದುವೆ ಮಂಟಪ ಬುಕಿಂಗ್ ರದ್ದು ಆರೋಪ: ಪ್ರಕರಣ ದಾಖಲು

ಮೀರತ್: ವರ ದಲಿತ ಎಂದು ತಿಳಿದು ಮದುವೆ ಮಂಟಪದ ಬುಕಿಂಗ್ ರದ್ದುಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮದುವೆ ಮಂಟಪದ ಮಾಲಕ ರಯೀಸ್ ಅಬ್ಬಾಸಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಯೀಸ್ ಅಬ್ಬಾಸಿ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಮದುವೆ ಮಂಟಪದಲ್ಲಿಯೇ ಮದುವೆ ನಡೆಯುವುದಾಗಿ ಪೊಲೀಸರು ವಧು-ವರರ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
‘ಸ್ಥಳೀಯ ನಿವಾಸಿ ಜೈದೀಪ್ ಎಂಬುವರು ರಯೀಸ್ ಅಬ್ಬಾಸಿ ಅವರ ಮದುವೆ ಮಂಟಪವನ್ನು ತಮ್ಮ ಸಹೋದರಿಯ ಮದುವೆಗೆ ಬುಕ್ ಮಾಡಿದ್ದರು. ವರ ವಾಲ್ಮೀಕಿ (ಪರಿಶಿಷ್ಟ ಜಾತಿ ಸಮುದಾಯ) ಎಂದು ತಿಳಿದ ಅಬ್ಬಾಸಿ ಅವರು ಬುಕಿಂಗ್ ಅನ್ನು ರದ್ದುಗೊಳಿಸಿದ್ದು, ಮದುವೆಗೆ ಬೇರೆ ಸ್ಥಳ ಹುಡುಕಬೇಕು ಎಂದು ತಿಳಿಸಿದರುʼ ಎಂದು ಜೈದೀಪ್ ದೂರಿನಲ್ಲಿ ತಿಳಿಸಿರುವುದಾಗಿ ಸ್ಥಳೀಯ ಸರ್ಕಲ್ ಅಧಿಕಾರಿ ರುಚಿತಾ ಚೌಧರಿ ಹೇಳಿದ್ದಾರೆ. ಅಬ್ಬಾಸಿ ವಿರುದ್ಧ ಖಾರ್ ಖೌಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ಸ್ಥಳದಲ್ಲಿ ಮದುವೆ ನಡೆಯಲಿದೆ ಎಂದು ಜೈದೀಪ್ ಅವರ ಕುಟುಂಬದ ಸದಸ್ಯರಿಗೆ ನಾವು ಭರವಸೆ ನೀಡಿದ್ದೇವೆ, ನಾವು ಮದುವೆ ಮಂಟಪದ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಮಂಟಪದ ಬುಕಿಂಗ್ ರದ್ದುಪಡಿಸಿರುವುದನ್ನು ಅಬ್ಬಾಸಿ ನಿರಾಕರಿಸಿದ್ದಾರೆ. ಮಾಂಸಹಾರ ಅಡುಗೆಗೆ ಮಾತ್ರ ತನ್ನ ತಕರಾರಿತ್ತು ಎಂದು ಅವರು ಹೇಳಿದ್ದಾರೆ.
"ನಾನು ಸ್ಥಳದಲ್ಲಿ ಮಾಂಸಾಹಾರಿ ಅಡುಗೆ ಮಾಡುವುದನ್ನು ಮಾತ್ರ ವಿರೋಧಿಸಿದ್ದೇನೆ. ನಾನು ಯಾರೊಂದಿಗೂ ಯಾವುದೇ ಜಾತಿಗೆ ಸಂಬಂಧಿಸಿದ ವಿಷಯವನ್ನು ಹೇಳಿಲ್ಲ ಅಥವಾ ಬುಕ್ಕಿಂಗ್ ಅನ್ನು ರದ್ದುಗೊಳಿಸಿಲ್ಲ" ಎಂದು ಮಂಟಪದ ಮಾಲಿಕ ಅಬ್ಬಾಸಿ ತಿಳಿಸಿದ್ದಾರೆ.







