ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಯಾರಿಗೂ ಟಿಕೆಟ್ ಭರವಸೆ ನೀಡಿರಲಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ.7: ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜಕಾರಣ ಎಂದರೆ ಚದುರಂಗ ಆಟ. ಬಿಜೆಪಿಯವರು ಆಡುತ್ತಿದ್ದಾರೆ. ಜೆಡಿಎಸ್‍ನವರು ಹಾಗೂ ಬಿಜೆಪಿ 224 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದಾರಾ, ನಾವು ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಚರ್ಚಿಸಿದ್ದೇವೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಅಸಮಾಧಾನ ಇರುವವರನ್ನು ಕರೆದು ಮಾತನಾಡಲಾಗುತ್ತದೆ. ಒಂದು ಕುಟುಂಬ, ಸಂಸಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಿ, ಸಮಾಧಾನ ಮಾಡಬೇಕು' ಎಂದು ತಿಳಿಸಿದರು.
ಮಹಾರಾಷ್ಟ್ರ ಸರಕಾರ ನಮ್ಮ ರಾಜ್ಯದಲ್ಲಿ ತನ್ನ ಪಾರುಪತ್ಯ ಸಾಧಿಸಲು ಮುಂದಾಗಿದ್ದು, ಈ ರಾಜ್ಯದ ಹಿತರಕ್ಷಣೆ ಕಾಯುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದ ಗಡಿ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆ ಸರಕಾರ ತಮ್ಮ ಯೋಜನೆ ಜಾರಿ ಮಾಡಲು ಹಣ ನೀಡಿದ್ದಾರೆ. ಇದು ಸರಿಯೇ, ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ. ನಮ್ಮ ಜನರಿಗೆ ಮಹಾರಾಷ್ಟ್ರ ಯೋಜನೆ ನೀಡಲು ಅವರು ಯಾರು, ನಮ್ಮಲ್ಲಿ ಸರಕಾರ ಇಲ್ಲವೇ ಎಂದು ಪ್ರಶ್ನಿಸಿದರು.
ಕನ್ನಡ ನೆಲ, ಜಲ, ಭಾಷೆ ಉಳಿಸಬೇಕಾದವರು ಈ ಬಗ್ಗೆ ಉಸಿರು ಎತ್ತುತ್ತಿಲ್ಲ. ಮಹಾರಾಷ್ಟ್ರ ಸರಕಾರ ನಮ್ಮ ರಾಜ್ಯದಲ್ಲಿ ಅದೇಗೆ ಯೋಜನೆ ಜಾರಿ ತರಲು ಮುಂದಾಗುತ್ತಿದೆ. ಇಲ್ಲಿನ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ರಾಜೀನಾಮೆ ನೀಡಲಿ, ಇಲ್ಲದಿದ್ದರೆ ರಾಜ್ಯಪಾಲರೇ ಅವರನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯಕ್ಕೆ ಅಮುಲ್ ಹಾಲು ಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಂದಿನಿ ಮುಗಿಸಿ ಅಮುಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.