ಉಕ್ರೇನ್ ಯುದ್ಧಯೋಜನೆ ಕುರಿತ ಅಮೆರಿಕದ ರಹಸ್ಯ ದಾಖಲೆ ಸೋರಿಕೆ

ವಾಷಿಂಗ್ಟನ್, ಎ.7: ವಸಂತ ಋತುವಿನಲ್ಲಿ(ಚಳಿಗಾಲ ಮತ್ತು ಬೇಸಿಗೆಕಾಲದ ನಡುವಿನ ಅವಧಿ) ರಶ್ಯಾ ವಿರುದ್ಧದ ಆಕ್ರಮಣಕ್ಕೆ ಉಕ್ರೇನ್ ಅನ್ನು ಸಿದ್ಧಪಡಿಸಲು ಸಹಾಯ ಮಾಡುವ ನೇಟೊ ಮತ್ತು ಅಮೆರಿಕದ ಯೋಜನೆಗಳನ್ನು ವಿವರಿಸುವ ರಹಸ್ಯ ದಾಖಲೆಗಳು ಸೋರಿಕೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮ ಪೋಸ್ಟ್‍ಗಳನ್ನು ಗಮನಿಸಲಾಗಿದ್ದು ಭದ್ರತಾ ಉಲ್ಲಂಘನೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೆಂಟಗಾನ್‍ನ ಸಹಾಯಕ ಮಾಧ್ಯಮ ಕಾರ್ಯದರ್ಶಿ ಸಬ್ರಿನಾ ಸಿಂಗ್‍ರನ್ನು ಉಲ್ಲೇಖಿಸಿದ ವರದಿ ಹೇಳಿದೆ. ದಾಖಲೆಗಳು, ಚಾರ್ಟ್‍ಗಳು, ಶಸ್ತ್ರಾಸ್ತ್ರ ವಿತರಣೆಯ ವಿವರಗಳು, ಸೇನೆಯ ಸಾಮಥ್ರ್ಯ ಮತ್ತಿತರ ವಿವರಗಳನ್ನು ಒಳಗೊಂಡ, ಕನಿಷ್ಟ 5 ವಾರಗಳ ಹಿಂದಿನ ಮಾಹಿತಿ ಸೋರಿಕೆಯಾಗಿದೆ. ಮಾಹಿತಿಯು 12 ಉಕ್ರೇನ್ ಯುದ್ಧದಳಗಳ ತರಬೇತಿ ವೇಳಾಪಟ್ಟಿಯನ್ನು ಒಳಗೊಂಡಿದ್ದು ಇದರಲ್ಲಿ 9 ದಳಗಳಿಗೆ ಅಮೆರಿಕ ಮತ್ತು ನೇಟೊ ಪಡೆ ತರಬೇತಿ ನೀಡುತ್ತಿರುವುದಾಗಿ ಉಲ್ಲೇಖಿಸಿದೆ.
ಅಲ್ಲದೆ 250 ಟ್ಯಾಂಕ್‍ಗಳು, 350ಕ್ಕೂ ಅಧಿಕ ಯಾಂತ್ರೀಕೃತ ವಾಹನಗಳ ಅಗತ್ಯವಿದೆ ಎಂಬ ಮಾಹಿತಿಯನ್ನು ಒಳಗೊಂಡಿದೆ. `ಹಿಮಾರ್ಸ್' ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಉಕ್ರೇನ್ ಮಿಲಿಟರಿಯ ನಿಯಂತ್ರಣದಡಿ ಇರುವ ಯುದ್ಧಸಾಮಾಗ್ರಿಗಳ ವೆಚ್ಚದ ದರವನ್ನೂ ಈ ಮಾಹಿತಿ ಒಳಗೊಂಡಿದೆ. `ಅತ್ಯಂತ ರಹಸ್ಯ' ಎಂದು ವರ್ಗೀಕರಿಸಲಾದ ಫೈಲ್ ಸೇರಿದಂತೆ ದಾಖಲೆಗಳನ್ನು ಟ್ವಿಟರ್ ಮತ್ತು ಟೆಲಿಗ್ರಾಂ ವೇದಿಕೆಯಲ್ಲಿ ಪ್ರಸಾರ ಮಾಡಲಾಗಿದೆ ಎಂದು ವರದಿ ಹೇಳಿದೆ.
ರಶ್ಯ ಪರವಾಗಿರುವ ಸರಕಾರಿ ಚಾನೆಲ್‍ಗಳಲ್ಲಿ ಈ ದಾಖಲೆ ಪ್ರಸಾರವಾಗಿದೆ. ಆದರೆ ಯುದ್ಧದಿಂದಾಗಿರುವ ಸಾವು-ನೋವಿನ ವಿವರದ ವಿಭಾಗದಲ್ಲಿ ದಾಖಲೆಗಳನ್ನು ತಿರುಚಿ, ರಶ್ಯದ ಕಡೆ ಆಗಿರುವ ಸಾವು-ನೋವಿನ ಪ್ರಮಾಣವನ್ನು ಕಡಿಮೆ ತೋರಿಸಿ, ಉಕ್ರೇನ್ ಕಡೆ ಆಗಿರುವ ಸಾವು-ನೋವಿನ ಪ್ರಮಾಣವನ್ನು ಹೆಚ್ಚಾಗಿ ತೋರಿಸಿರುವ ಸಾಧ್ಯತೆಯಿದೆ. ಈ ಬದಲಾವಣೆ ತಪ್ಪು ಮಾಹಿತಿ ಪ್ರಸಾರ ಮಾಡುವ ರಶ್ಯದ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.