ಅಮೆರಿಕನ್ನರಿಗೆ ವಂಚನೆ: ಭಾರತದ ಪ್ರಜೆಗೆ ಜೈಲುಶಿಕ್ಷೆ, 2.4 ಶತಕೋಟಿ ಡಾಲರ್ ದಂಡ

ವಾಷಿಂಗ್ಟನ್, ಎ.7: ಅಮೆರಿಕದ ಹಿರಿಯ ನಾಗರಿಕರನ್ನು ವಂಚಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆಗೆ ಅಮೆರಿಕದ ನ್ಯಾಯಾಲಯ 33 ತಿಂಗಳ ಜೈಲುಶಿಕ್ಷೆಯ ಜತೆ 2.4 ಶತಕೋಟಿ ಡಾಲರ್ ದಂಡ ವಿಧಿಸಿದೆ.
ಆಶಿಷ್ ಬಜಾಜ್ ಜೈಲುಶಿಕ್ಷೆಗೆ ಒಳಗಾದ ವ್ಯಕ್ತಿ. ದಾಖಲೆಗಳ ಪ್ರಕಾರ 2020ರ ಎಪ್ರಿಲ್‍ನಿಂದ 2021ರ ಆಗಸ್ಟ್‍ವರೆಗೆ ಬಜಾಜ್ ಮತ್ತವರ ವಂಚಕರ ತಂಡವು ವಿವಿಧ ಬ್ಯಾಂಕ್ ಅಧಿಕಾರಿಗಳು, ಆನ್‍ಲೈನ್ ಚಿಲ್ಲರೆ ವ್ಯಾಪಾರಿಗಳು, ಆನ್‍ಲೈನ್ ಪಾವತಿ ಕಂಪೆನಿಯ ಅಧಿಕಾರಿಗಳೆಂದು ಹೇಳಿಕೊಂಡು ಅಮೆರಿಕದ ಹಿರಿಯ ನಾಗರಿಕರನ್ನು ವಂಚಿಸಿದೆ. ಆನ್‍ಲೈನ್‍ನಲ್ಲಿ ವಂಚನೆ ಎಸಗುವವರನ್ನು ಹಿಡಿಯಲು ಕುಟುಕು ಕಾರ್ಯಾಚರಣೆ ನಡೆಸುವುದಾಗಿ ಹಿರಿಯ ನಾಗರಿಕರನ್ನು ನಂಬಿಸಿ, ತಾವು ಸೂಚಿಸಿದ ಖಾತೆಗೆ ಹಣ ವರ್ಗಾಯಿಸುವಂತೆ(ಆ ಹಣ ಅವರ ಖಾತೆಗೆ ಮರಳಿ ಜಮೆಯಾಗಲಿದೆ ಎಂದು ನಂಬಿಸಿ) ಸೂಚಿಸಿದ್ದಾರೆ.
ಅವರ ಮಾತಿನಲ್ಲಿ ವಿಶ್ವಾಸವಿರಿಸಿದ ವ್ಯಕ್ತಿಗಳು ಬಜಾಜ್ ಹೇಳಿದ ಪ್ರಕಾರ ಭಾರತ, ಚೀನಾ, ಸಿಂಗಾಪುರ, ಯುಎಇಯ ವಿವಿಧ ಬ್ಯಾಂಕ್‍ಗಳಿಗೆ ಹಣ ವರ್ಗಾಯಿಸಿದ್ದಾರೆ. ಹೀಗೆ 2,50,000 ಡಾಲರ್ ಗೂ ಅಧಿಕ ಹಣ ಸಂಗ್ರಹಿಸಿದ್ದ ಬಜಾಜ್ ಅವರನ್ನು ವಂಚಿಸಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.