371(ಜೆ) ನೇಮಕಾತಿಯಡಿಯಲ್ಲಿ 26,264 ಹುದ್ದೆಗಳು ಭರ್ತಿ ಮಾಡಲು ಬಾಕಿ

ಬೆಂಗಳೂರು: ಭಾರತ ಸಂವಿಧಾನದ ಅನುಚ್ಛೇದ 371(ಜೆ) ನೇಮಕಾತಿಯಡಿಯಲ್ಲಿ ಇನ್ನೂ 26,264 ಹುದ್ದೆಗಳು ಭರ್ತಿ ಮಾಡಲು ಬಾಕಿ ಇದೆ. ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ, ಮುಂಭಡ್ತಿ, ಕೆಪಿಎಸ್‌ಸಿ, ಕೆಇಎ ಸೇರಿದಂತೆ ಇನ್ನಿತರ ನೇಮಕಾತಿ ಸಂಸ್ಥೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇಲಾಖೆಗಳು ಅನುಸರಿಸಿರುವ ವಿಳಂಬ ನೀತಿ ಬಗ್ಗೆ ಸಚಿವ ಸಂಪುಟ ಸಭೆಯು ಅಸಮಾಧಾನ ವ್ಯಕ್ತಪಡಿಸಿರುವುದು ಬಹಿರಂಗವಾಗಿದೆ.
371(ಜೆ) ಅಡಿಯಲ್ಲಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಮೀಸಲಾತಿ ನೀತಿ ಪಾಲನೆ ಬಗ್ಗೆ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಬಿ ಶ್ರೀರಾಮುಲು ಅಧ್ಯಕ್ಷತೆಯಲ್ಲಿ 2023ರ ಮಾರ್ಚ್ 24ರಂದು
ನಡೆದಿದ್ದ ಸಭೆಯು ಇಲಾಖೆಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಸಭೆಯ ನಡವಳಿ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
371(ಜೆ) ಅಡಿಯಲ್ಲಿ ಮೀಸಲಾತಿ ಅನುಷ್ಠಾನ ಸೇರಿದಂತೆ ಇನ್ನಿತರ ಆದೇಶಗಳ ಪಾಲನೆಯಾಗಿದೆಯೇ ಇಲ್ಲವೇ ಎಂಬ ಕುರಿತು ಹಲವು ಇಲಾಖೆಗಳು ಸಚಿವ ಸಂಪುಟ ಉಪ ಸಮಿತಿಗೆ ಸರಿಯಾದ ಮಾಹಿತಿ ನೀಡಿಲ್ಲ. ಅಲ್ಲದೆ ನೇಮಕಾತಿ ಪ್ರಕ್ರಿಯೆಗಳನ್ನೂ ಪ್ರಾರಂಭಿಸಿಲ್ಲ ಎಂಬುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.
ಕೆಲವು ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದಿನ್ನೂ ಅಂತಿಮವಾಗಿಲ್ಲ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ತೊಡಕಾಗಿದೆ ಎಂದು ನಡವಳಿಯಿಂದ ತಿಳಿದು ಬಂದಿದೆ.
ನೇರ ನೇಮಕಾತಿ ಮಾತ್ರವಲ್ಲದೇ ಮುಂಭಡ್ತಿಗೆ ಸಂಬಂಧಿಸಿದಂತೆಯೂ ಇಲಾಖೆಗಳು ವಿಳಂಬ ಧೋರಣೆಯನ್ನು ಪ್ರದರ್ಶಿಸಿವೆ. ಸ್ಥಳೀಯ ವೃಂದದಲ್ಲಿ ಮುಂಭಡ್ತಿಗೆ ಸಂಬಂಧಿಸಿದಂತೆ ಒಟ್ಟು 33,043 ಗುರುತಿಸಲಾದ ಹುದ್ದೆಗಳಲ್ಲಿ 23,444 ಹುದ್ದೆಗಳನ್ನು ಈವರೆಗೆ ಭರ್ತಿ ಮಾಡಲಾಗಿದೆ. ಪ್ರಸಕ್ತ 9,604 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇದೆ. ಅದರಲ್ಲಿ 1,662 ಅಭ್ಯರ್ಥಿಗಳು ಮುಂಭಡ್ತಿಗೆ ಅರ್ಹತೆ ಪಡೆದಿಲ್ಲ.
ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ, ಮುಂಭಡ್ತಿ, ಕೆಪಿಎಸ್‌ಸಿ, ಕೆಇಎ ಸೇರಿದಂತೆ ಇನ್ನಿತರ ನೇಮಕಾತಿ ಸಂಸ್ಥೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ 2022ರ ಆಗಸ್ಟ್ 3ರಂದು ಸಚಿವ ಸಂಪುಟದ ಉಪ ಸಮಿತಿ ಸಭೆಗೆ ಯೋಜನಾ ಇಲಾಖೆಯು ಸಲ್ಲಿಸಿರುವ ವಿಷಯ ಟಿಪ್ಪಣಿಯಲ್ಲಿ 27,735 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇರುವುದನ್ನು ಪ್ರಸ್ತಾಪಿಸಿತ್ತು. ಬಾಕಿ ಇರುವ ಮುಂಭಡ್ತಿ ಹುದ್ದೆಗಳನ್ನು 2022ರ ಮೇ ಅಂತ್ಯದೊಳಗೆ ಮತ್ತು ಬಾಕಿ ಇರುವ ನೇರ ನೇಮಕಾತಿ ಹುದ್ದೆಗಳನ್ನು ಜುಲೈ 2022ರ ಅಂತ್ಯದೊಳಗೆ ಭರ್ತಿ ಮಾಡಲು ಸಮಯಾವಕಾಶ ನೀಡಿತ್ತು.
ಕೆಪಿಎಸ್‌ಸಿಯಲ್ಲಿ 3,189, ಕೆಎಇ ಮತ್ತು ಇತರ ನೇಮಕಾತಿ ಸಂಸ್ಥೆಗಳಲ್ಲಿ 9,309 ಹುದ್ದೆಗಳು ಬಾಕಿ ಇವೆ. ಇದರ ಹೊರತಾಗಿಯೂ ಇನ್ನು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ 12,846 ಹುದ್ದೆಗಳು ಬಾಕಿ ಇವೆ. ಅದೇ ರೀತಿ ಮುಂಭಡ್ತಿಯಿಂದ ಭರ್ತಿ ಮಾಡಬೇಕಿರುವ ಒಟ್ಟು 32,284 ಹುದ್ದೆಗಳ ಪೈಕಿ 22,603 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ವಿಭಾಗದಲ್ಲಿ ಇನ್ನೂ 9,667 ಹುದ್ದೆಗಳಿಗೆ ಮುಂಭಡ್ತಿಯಿಂದ ತುಂಬಬೇಕಿತ್ತು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 371(ಜೆ) ಅನ್ವಯ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ ಅಡಿಯಲ್ಲಿ 6,.974 ಹುದ್ದೆಗಳು ಬಾಕಿ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,056, ಸಾರಿಗೆ ಇಲಾಖೆಯಲ್ಲಿ 2,250, ಉನ್ನತ ಶಿಕ್ಷಣ ಇಲಾಖೆಯಲ್ಲಿ 1,773, ಇಂಧನ ಇಲಾಖೆಯಲ್ಲಿ 1,584, ನಗರಾಭಿವೃದ್ದಿ ಇಲಾಖೆಯಲ್ಲಿ 1,273 ಹುದ್ದೆಗಳು ಬಾಕಿ ಇವೆ.
ಅದೇ ರೀತಿ ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ 2,044, ಇಂಧನ ಇಲಾಖೆಯಲ್ಲಿ 1,419 ಹುದ್ದೆಗಳನ್ನು ಮುಂಭಡ್ತಿಯಿಂದ ಭರ್ತಿ ಮಾಡಿಕೊಳ್ಳಬೇಕಿದೆ. ಕೆಇಎ ಮತ್ತು ಇತರ ನೇಮಕಾತಿ ಸಂಸ್ಥೆಗಳಲ್ಲಿ ಬಾಕಿ ಇರುವ ಹುದ್ದೆಗಳ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 5,050, ಸಾರಿಗೆ ಇಲಾಖೆಯಲ್ಲಿ 1,595, ಹುದ್ದೆಗಳು ಬಾಕಿ ಇವೆ. ಕೆಪಿಎಸ್ಸಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 439, ಉನ್ನತ ಶಿಕ್ಷಣ ಇಲಾಖೆಯಲ್ಲಿ 354, ನಗರಾಭಿವೃದ್ಧಿ ಇಲಾಖೆಯಲ್ಲಿ 384 ಹುದ್ದೆಗಳು ಬಾಕಿ ಇರುವುದು ತಿಳಿದು ಬಂದಿದೆ.







