ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ?: ಸಚಿವ ಸುಧಾಕರ್
''ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು...''

ಬೆಂಗಳೂರು: 'ನಂದಿನಿ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಅದು ಈಗಾಗಲೇ ಮಹಾರಾಷ್ಟ್ರಕ್ಕೆ ಪ್ರವೇಶಿಸಿದೆ. ದೆಹಲಿಗೂ ಹಾಲನ್ನು ಪೂರೈಸಲು ಕೆಎಂಎಫ್ ಪ್ರಯತ್ನ ಮಾಡುತ್ತಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮುಲ್ ಸಂಸ್ಥೆ ಬೆಂಗಳೂರಿನಲ್ಲಿ ಹಾಲು ಮಾರಾಟಕ್ಕೆ ಇಳಿದಿರುವ ಬಗ್ಗೆ ಆಕ್ಷೇಪ ಎತ್ತಿರುವ ಪ್ರತಿಪಕ್ಷ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
'16ಕ್ಕೂ ಹೆಚ್ಚು ವಿವಿಧ ಖಾಸಗಿ ಸಂಸ್ಥೆಗಳು ತಮ್ಮ ಹಾಲನ್ನು ರಾಜ್ಯದಲ್ಲಿ ಹಿಂದಿನಿಂದಲೂ ಮಾರಾಟ ಮಾಡುತ್ತಿದ್ದಾರೆ. ಆಗ ಯಾರಿಗೂ ಕೂಡ ನಂದಿನಿ ನೆನಪಾಗಿರಲಿಲ್ಲ. ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ?, ಇದೆಲ್ಲಾ ಬಿಡಬೇಕು, ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು' ಎಂದು ಹೇಳಿದರು.
'ಕೋವಿಡ್ ಲಸಿಕೆ ವಿಷಯದಲ್ಲಿ ಕಾಂಗ್ರೆಸ್ ನಡೆ ಖಂಡನಾರ್ಹ'
'ಲಸಿಕೆ ವಿಚಾರದಲ್ಲಿ ವಿಳಂಬಕ್ಕೆ ಕಾಂಗ್ರೆಸ್ ಟೀಕೆ ವ್ಯಕ್ತವಾಗಿತ್ತು. ತುರ್ತು ಮಾತ್ರವಲ್ಲದೆ ವಿಶೇóಷ ಸಂದರ್ಭ ಎಂದು ಮರೆತು ಇಲ್ಲಿವರೆಗೆ ಕಾಂಗ್ರೆಸ್ ರಾಜಕಾರಣ ಬೆರೆಸಿದೆ. ಎಳ್ಳಷ್ಟೂ ಸಹಕಾರ ಕೊಡದೆ ಇರುವುದು ರಾಜ್ಯ ಮತ್ತು ದೇಶದ ಜನತೆಗೆ ಮಾಡಿದ ಘೋರ ಅಪರಾಧ' ಎಂದು ಸುಧಾಕರ್ ಟೀಕಿಸಿದರು.





