ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ: ಶರದ್ ಪವಾರ್

ಹೊಸದಿಲ್ಲಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(NCP)ದ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶರದ್ ಪವಾರ್, "ಬಿಜೆಪಿಯು ರಾಷ್ಟ್ರೀಯ ವಿಷಯಗಳನ್ನು ರಾಜ್ಯ ವಿಷಯಗಳೊಂದಿಗೆ ತಳುಕು ಹಾಕಿ ಪ್ರಚಾರ ನಡೆಸುತ್ತದೆಯಾದರೂ, ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣಾ ದೃಷ್ಟಿಕೋನದಿಂದ ನೋಡಬಾರದು" ಎಂದು ಪ್ರತಿಪಾದಿಸಿದ್ದಾರೆ.
"ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಎರಡು ಬಗೆಯ ಚುನಾವಣೆಗಳು ನಡೆಯಲಿವೆ ಎಂಬುದು ನನ್ನ ಲೆಕ್ಕಾಚಾರವಾಗಿದೆ. ಒಂದು ಕೇಂದ್ರ ಸರ್ಕಾರಕ್ಕಾಗಿ ನಡೆಯುವ ರಾಷ್ಟ್ರೀಯ ಚುನಾವಣೆಯಾದರೆ ಮತ್ತೊಂದು ರಾಜ್ಯಗಳಿಗಾಗಿ ನಡೆಯುವ ಚುನಾವಣೆ. ನನ್ನ ವೈಯಕ್ತಿಕ ಲೆಕ್ಕಾಚಾರದ ಪ್ರಕಾರ, ನೀವು ಒಪ್ಪದಿದ್ದರೂ ರಾಜ್ಯ ಚುನಾವಣೆಗಳೆಂದಿಗೂ ವಿಭಿನ್ನ ಆಟಗಳು" ಎಂದು ಪವಾರ್ ಹೇಳಿದ್ದಾರೆ.
"ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಸರ್ಕಾರಗಳು ಬಿಜೆಪಿ ಸರ್ಕಾರಗಳಲ್ಲ. ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ನನ್ನ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ ಗೆಲುವು ಸಾಧಿಸಲಿದೆ" ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮೈತ್ರಿ ಪಕ್ಷವಾಗಿರುವ ಎನ್‌ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಹೇಗೆ ಬಿಜೆಪಿಯೇತರ ಪಕ್ಷಗಳು ರಾಜ್ಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿವೆ ಎಂಬುದನ್ನು ವಿವರಿಸಿರುವ ಶರದ್ ಪವಾರ್, ರಾಜ್ಯ ಚುನಾವಣೆಗಳ ವಿಚಾರಕ್ಕೆ ಬಂದಾಗ ನೆಲದ ವಾಸ್ತವಗಳು ವಿಭಿನ್ನವಾಗಿರುತ್ತವೆ ಎಂಬ ಕುರಿತು ಹಲವಾರು ನಿದರ್ಶನಗಳನ್ನು ನೀಡಿದ್ದಾರೆ.
"ಶಾಸಕರು ಪಕ್ಷದಿಂದ ಹೊರಗೆ ಹೋದರೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು ಮತ್ತು ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ನಂತರವಷ್ಟೇ ಬಿಜೆಪಿ ಸರ್ಕಾರ ರಚಿಸಿತು. ರಾಜಸ್ಥಾನ, ದಿಲ್ಲಿ, ಪಂಜಾಬ್, ಪಶ್ಚಿಮ ಬಂಗಾಳದಂಥ ಹಲವಾರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ" ಎಂದು ಅವರು ನಿದರ್ಶನ ನೀಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣೆ ಕುರಿತೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಶರದ್ ಪವಾರ್, "ವಿರೋಧ ಪಕ್ಷಗಳು ಒಗ್ಗಟ್ಟಾಗಿ ಏನನ್ನಾದರೂ ಮಾಡಬೇಕಿದೆ. ಇಲ್ಲವಾದರೆ, ಬಿಜೆಪಿಯನ್ನು ಮಣಿಸುವುದು ಕಠಿಣವಾಗಲಿದೆ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಲಕ್ಷಿಸುವುದು ತುಂಬಾ ಕಷ್ಟ. ಒಂದು ವೇಳೆ ನಾವು ಒಗ್ಗಟ್ಟಾಗಿ ಏನನ್ನಾದರೂ ಮಾಡದಿದ್ದರೆ, ನಮ್ಮ ಪರವಾಗಿ ಏನೂ ಆಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
2008ರಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತ ರಾಜ್ಯವಾದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸದ್ಯ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿದ್ದು, ಸತತ ಎರಡನೆ ಬಾರಿಯೂ ಅಧಿಕಾರಕ್ಕೆ ಮರಳುವ ಪ್ರಯತ್ನದಲ್ಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.







