ತನ್ನ ಹುಟ್ಟುಹಬ್ಬದಂದು 'ಪುಷ್ಪಾ: ದಿ ರೂಲ್'ನ ವಿಶಿಷ್ಟ ಪೋಸ್ಟರ್ ಶೇರ್ ಮಾಡಿದ ಅಲ್ಲು ಅರ್ಜುನ್
"ವೇರ್ ಈಸ್ ಪುಷ್ಪಾ?" ಟೀಸರ್ ಗೆ ಅಭಿಮಾನಿಗಳ ಮೆಚ್ಚುಗೆ

ಹೊಸದಿಲ್ಲಿ: ಇಂದು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಟ ಅಲ್ಲು ಅರ್ಜುನ್, ಈ ಸಂದರ್ಭ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಮುಂಬರುವ ಚಲನಚಿತ್ರ "ಪುಷ್ಪಾ: ದಿ ರೂಲ್" (Pushpa 2: The Rule) ಇದರ ಹೊಚ್ಚ ಹೊಸ ಪೋಸ್ಟರ್ ಒಂದನ್ನು ಶೇರ್ ಮಾಡಿ ಎಲ್ಲರನ್ನೂ ರೋಮಾಂಚನಗೊಳಿಸಿದ್ದಾರೆ.
ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರು ಸೀರೆ ಮತ್ತು ಆಭರಣಗಳಿಂದ ಅಲಂಕೃತರಾಗಿದ್ದಾರೆ ಹಾಗೂ ಅವರ ಮುಖಕ್ಕೆ ಕೆಂಪು ಮತ್ತು ನೀಲಿ ಛಾಯೆಯ ಬಣ್ಣ ಹಚ್ಚಲಾಗಿದೆ. ಅದಕ್ಕೆ ಅವರು "ಪುಷ್ಪಾ 2 ದಿ ರೂಲ್ ಬಿಗಿನ್ಸ್" ಎಂಬ ಶೀರ್ಷಿಕೆ ನೀಡಿದ್ದಾರೆ.
ಚಿತ್ರ ತಯಾರಕರು "ವೇರ್ ಈಸ್ ಪುಷ್ಪಾ" ಶೀರ್ಷಿಕೆಯೊಂದಿಗೆ ಟೀಸರ್ ಒಂದನ್ನೂ ಬಿಡುಗಡೆಗೊಳಿಸಿದ್ದು ಅದು ವೈರಲ್ ಆಗಿದೆ. ಈ ಚಿತ್ರ ಕಥೆ ಮತ್ತು ನಿರ್ದೇಶನ ಸುಕುಮಾರ್ ಅವರದ್ದಾಗಿದೆ. ಈ ವರ್ಷ "ಪುಷ್ಪಾ: ದಿ ರೂಲ್" ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.
ಡಿಸೆಂಬರ್ 2021 ರಲ್ಲಿ ಪುಷ್ಪಾ: ದಿ ರೈಸ್ ಬಿಡುಗಡೆಯಾದಂದಿನಿಂದ ಅಭಿಮಾನಿಗಳು ಅದರ ಎರಡನೇ ಭಾಗಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿದ್ದರು. ಈಗ ಅದರ ಟೀಸರ್ ಬಿಡುಗಡೆ, ಜೊತೆಗೆ ಅಲ್ಲು ಅರ್ಜುನ್ ಅವರು ಶೇರ್ ಮಾಡಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಇನ್ನಷ್ಟು ಕಾತರ ಮೂಡಿಸಿದೆ. ಈ ಪೋಸ್ಟರ್‌ನಲ್ಲಿ ತಮ್ಮ ನೆಚ್ಚಿನ ನಟನ ವಿನೂತನ ಅವತಾರ, ಸೀರೆ, ಆಭರಣ, ಬಳೆ, ಮೂಗುತಿ ಜೊತೆಗೆ ಹೂವಿನ ಮತ್ತು ನಿಂಬೆ ಹಣ್ಣುಗಳ ಮಾಲೆ ಇರುವುದು ಈ ಎರಡನೇ ಭಾಗ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಇಮ್ಮಡಿಯಾಗಿದೆ.
"ಪುಷ್ಪ ಅಲ್ಲ ಬೆಂಕಿ " "ಫ್ಲವರ್ ನಹಿ ಫೈರ್" ಎಂದು ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ತೆಲುಗು, ಹಿಂದಿ, ಕನ್ನಡ ಸಹಿತ ಐದು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಹೊಸ ಟೀಸರ್ ಅನ್ನು 4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದರೆ, ಅಲ್ಲು ಅವರ ವಿನೂತನ ಪೋಸ್ಟರ್ ಅನ್ನು 46 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.