ಪಾಸ್‌ಪೋರ್ಟ್ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಾಪಸ್ ಪಡೆಯಲು ಭಾರೀ ಒತ್ತಡ: ಇಲ್ತಿಜಾ ಮುಫ್ತಿ ಆರೋಪ

ಶ್ರೀನಗರ್: ತಮಗೆ ದೇಶ-ನಿರ್ದಿಷ್ಟ ಎರಡು ವರ್ಷ ಅವಧಿಯ ಪಾಸ್‌ಪೋರ್ಟ್ ನೀಡಿರುವುದನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿಗೆ ತಾವು ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯಲು ತಮ್ಮ ಮೇಲೆ ಆಗಾಧ ಒತ್ತಡ ಹೇರಲಾಗುತ್ತಿದೆ ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ.
ಆದರೆ ಆಕೆಯ ಆರೋಪಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಲ್ಲಗಳೆದಿದ್ದಾರೆ.
ತಮಗೆ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಎಪ್ರಿಲ್ 5 ರಂದು ಯುಎಇಗೆ ಎರಡು ವರ್ಷ ಆವಧಿಯ ಪಾಸ್‌ಪೋರ್ಟ್ ಮಂಜೂರುಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ತಮ್ಮ ಹಿಂದಿನ ಪಾಸ್‌ಪೋರ್ಟ್ ಅವಧಿ ಮುಕ್ತಾಯದ ನಂತರ ಅರ್ಜಿಯನ್ನು ಅವರು ಸಲ್ಲಿಸಿದ್ದರು.
"ನ್ಯಾಯಾಂಗದ ದಾರಿತಪ್ಪಿಸಲಾಗುತ್ತಿದೆ. ಪಾಸ್‌ಪೋರ್ಟ್ ನೀಡಲಾಗಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪಾಸ್‌ಪೋರ್ಟ್ ನೀಡಲಾಗಿರುವುದರಿಂದ ಅರ್ಜಿಯನ್ನು ವಜಾಗೊಳಿಸಬೇಕೆಂದು ಉಪ ಸಾಲಿಸಿಟರ್ ಜನರಲ್ ಶಂಸಿ ನ್ಯಾಯಾಲಯಕ್ಕೆ ಕೋರಿದ್ದಾರೆ," ಎಂದು ಹೇಳಿದ ಇಲ್ತಿಜಾ ತಮ್ಮ ಎರಡು ವರ್ಷ ಅವಧಿಯ ದೇಶ ನಿರ್ದಿಷ್ಟ ಪಾಸ್‌ಪೋರ್ಟ್ ಉಲ್ಲೇಖಿಸಿ ಯಾವ ರೀತಿಯ ಪಾಸ್‌ಪೋರ್ಟ್ ಇದಾಗಿದೆ ಎಂದು ಪ್ರಶ್ನಿಸಿದ್ದಾರೆ.
"ನಾನು ಕಾನೂನು ಗೌರವಿಸುವ ಭಾರತೀಯ ನಾಗರಿಕಳು, ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಆದರೆ ಎರಡು ವರ್ಷ ಅವಧಿಯ ಪಾಸ್ ಪೋರ್ಟ್ ನೀಡಲು ಅಧಿಕೃತ ಗೌಪ್ಯತೆ ಕಾಯಿದೆಯನ್ನು ಹೇರಲಾಗಿದೆ. ಇದನ್ನು ಗೂಢಚಾರಿಕೆ ಆರೋಪ ಇರುವವರಿಗೆ ಮಾತ್ರ ಹೇರಲಾಗುತ್ತದೆ. ನಾನೇನು ಉಗ್ರವಾದಿಯೇ, ದೇಶವಿರೋಧಿಯೇ,?" ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ ಆಕೆಯ ಆರೋಪಗಳು ಸಂಪೂರ್ಣವಾಗಿ ತಪ್ಪು ಎಂದು ಜಮ್ಮ ಕಾಶ್ಮೀರ ಪೊಲೀಶರು ಹೇಳಿದ್ದಾರೆ. ಆದರೆ ತಮ್ಮ ವಿವರಣೆಯಲ್ಲಿ ಪೊಲೀಸರು ಆಕೆಯ ಹೆಸರನ್ನು ಉಲ್ಲೇಖಿಸಿಲ್ಲ. 2017-18 ಅವಧಿಯಲ್ಲಿ 58 ಯುವಕರಿಗೆ ತಪ್ಪಾಗಿ ಪಾಸ್‌ಪೋರ್ಟ್ ನೀಡಲಾಗಿರುವುದು ಪತ್ತೆಯಾಗಿರುವುದು ಸಂಬಂಧಿತ ಪ್ರಾಧಿಕಾರಗಳು ಪಾಸ್‌ಪೋರ್ಟ್ ನೀಡಿಕೆಯಲ್ಲಿ ಅದೆಷ್ಟು ಎಚ್ಚರಿಕೆ ವಹಿಸುತ್ತವೆ ಎಂದು ಸೂಚಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಅಮುಲ್ ಮಾರುಕಟ್ಟೆ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಿ.ಟಿ. ರವಿ







