ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು: ಯೆನೆಪೋಯ ಡೀಮ್ಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎ.7ರಂದು ವಿಶ್ವ ಆರೋಗ್ಯ ದಿನಾಚರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಪ್ರಭಾ ಮಾತನಾಡಿ, ನಾಗರಿಕರು ಯಾವ ರೀತಿಯ ಜೀವನ ಶೈಲಿಯನ್ನು ನಡೆಸಬೇಕು, ಯಾವೆಲ್ಲಾ ಆಹಾರ ಸೇವನಾ ಪದ್ದತಿಯನ್ನು ಅನುಸರಿಸಬೇಕು ಮತ್ತು ಜೀವನದ ಸಂಧ್ಯಾ ಕಾಲದಲ್ಲಿ ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿರಬೇಕೆಂದು ಪ್ರಾತ್ಯಕ್ಷವಾಗಿ ವಿವರಿಸಿದರು.
ಶಿಶು ಮತ್ತು ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಮಾನಾಥ ಮಹಾಲೆ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಾಲಚಂದ್ರ ಭಟ್ ಆರೋಗ್ಯದ ಮಹತ್ವ, ಸರಿಯಾದ ಆರೋಗ್ಯವಂತ ಜೀವನ ನಡೆಸುವ ಕ್ರಮಗಳನ್ನು ತಿಳಿಸಿದರು.
ಈ ಸಂದರ್ಭ ದಾದಿಯರ ಮುಖ್ಯ ಅಧಿಕಾರಿ ಪ್ರೊ.ಬ್ರಿಡ್ಜೆಟ್ ಡಿ.ಸಿಲ್ವಾ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಜಯಾನಂದ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಸಲುವಾಗಿ ಉಚಿತ ಮಧುಮೇಹ ತಪಾಸಣೆ, ಎಲುಬು ಕ್ಯಾಲ್ಸಿಯಂ ಸಾಂದ್ರತೆ ಪರೀಕ್ಷೆ ಮತ್ತು ರಕ್ತದೊತ್ತಡ ತಪಾಸಣೆಗಳನ್ನು ನಡೆಸಲಾಯಿತು.