ಕುಂದಾಪುರ: ಹೊಯ್ಸಳ ರಾಣಿ ಚಿಕ್ಕಾಯಿ ತಾಯಿಯ ಅವಳಿ ಶಾಸನ ಪತ್ತೆ

ಕುಂದಾಪುರ, ಎ.8: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಡಿ ಪ್ರದೇಶದ ಶ್ರೀ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ, ಸ್ಥಳೀಯರು ‘ಅಕ್ಕ-ತಂಗಿ ಕಲ್ಲು’ ಎಂದು ಕರೆಯುವ ಹೊಯ್ಸಳ ರಾಣಿ ಹಾಗೂ ಆಳುಪ ರಾಜ ಮನೆತನದ ಚಿಕ್ಕಾಯಿ ತಾಯಿಗೆ ಸೇರಿರುವ ಎರಡು ಶಾಸನಗಳನ್ನು ಪತ್ತೆ ಹಚ್ಚಲಾಗಿದೆ.
ಹೈದರಾಬಾದ್‌ನ ಪ್ಲೀಚ್ ಇಂಡಿಯಾ ಫೌಂಡೇಶನ್‌ನಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಈ ಅವಳಿ ಶಾಸನಗಳ ಅಧ್ಯಯನ ಮಾಡಿ ವಿಷಯ ಬಹಿರಂಗ ಪಡಿಸಿದ್ದಾರೆ.
ಈ ಎರಡೂ ಶಾಸನಗಳು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿವೆ. ಇದರಲ್ಲಿ ಒಂದು ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 24 ಸಾಲುಗಳನ್ನು ಹೊಂದಿದ್ದು, ಕೆಲವೊಂದು ಅಕ್ಷರಗಳು ತ್ರುಟಿತಗೊಂಡಿದೆ. ಶಾಸನದ ಮೇಲ್ಪಟ್ಟಿಕೆಯಲ್ಲಿ ಶಿವಲಿಂಗವಿದ್ದು, ಇಕ್ಕೆಲಗಳಲ್ಲಿಸೂರ್ಯ-ಚಂದ್ರ, ರಾಜಕತ್ತಿ, ನಂದಾದೀಪ ಮತ್ತು ದನ-ಕರುವಿನ ಉಬ್ಬು ಕೆತ್ತನೆಯಿದೆ.
ಶಕವರ್ಷ 1268 ವ್ಯಯ ಸಂವತ್ಸರದ ಪುಷ್ಯ ಶುದ್ಧ 15 ಧನು ಮಾಸ ಗುರುವಾರ ಅಂದರೆ ಸಾಮಾನ್ಯ ವರ್ಷ 1347 ಜನವರಿ 7ರ ಕಾಲಮಾನದ ಈ ಶಾಸನವು ಚಿಕ್ಕಾಯಿಯನ್ನು ‘ಶ್ರೀಮತ್ಪಾಂಡ್ಯ ಚಕ್ರವರ್ತಿ, ಅರಿರಾಯ ಬಸವಶಂಕರ, ರಾಯಗಜಾಂಕುಸ’ ಎಂಬ ಬಿರುದುಗಳಿಂದ ಉಲ್ಲೇಖಿಸಿದ್ದು ಮಾತ್ರವಲ್ಲದೇ ’ಹೊಯ್ಸಳ ವೀರ ಬಲ್ಲಾಳದೇವರ ಪಟ್ಟದ ಪಿರಿಯರಸಿ’ ಎಂದು ಪ್ರಸ್ತಾಪಿಸಲಾಗಿದೆ.
ಚಿಕ್ಕಾಯಿ, ಮಹಾಪ್ರಧಾನ ವೈಯಿಜಪ್ಪ ದಂಡನಾಯಕ, ಅಜ್ಜಂಣ ಸಾಹಣಿ, ಎರಡು ಕೊಲ ಬಳಿಯವರು ಮತ್ತು ಸಮಸ್ತ ಪ್ರಧಾನರು ಈ ಐವರು ಮೊದಲಾಗಿ ಗುಳ್ಳ ಹಾಡಿಯ (ಪ್ರಸ್ತುತ ಗುಳ್ಳಾಡಿ) ಚಿತ್ತಾರಿಯ ದೇವಾಲಯಕ್ಕೆ 15 ಹೊನ್ನನ್ನು ದಾನ ನೀಡಿರುವ ಬಗ್ಗೆ ಈ ಶಾಸನವು ತಿಳಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.
ಬಹುತೇಕ ತ್ರುಟಿತಗೊಂಡಿರುವ ಇನ್ನೊಂದು ಶಾಸನವು ಸಹ ಕೆತ್ತನೆಯಲ್ಲಿ ಮೊದಲಿನ ಶಾಸನದ ತದ್ರೂಪದಂತೆ ಕಾಣುವುದರಿಂದ ಸ್ಥಳೀಯರು ಇದನ್ನು ಅಕ್ಕ-ತಂಗಿ ಕಲ್ಲು ಎಂದು ಕರೆದುಕೊಂಡು ಬಂದಿರುವುದು ವಾಡಿಕೆಯಾಗಿ ರಬಹುದು. ಈ ಶಾಸನದಲ್ಲಿಯು ಸಹ ಚಿಕ್ಕಾಯಿ ತಾಯಿಯನ್ನು ಮೊದಲಿನ ಶಾಸನದಲ್ಲಿರುವ ಬಿರುದುಗಳಿಂದಲೇ ಉಲ್ಲೇಖಿಸಿರುವುದನ್ನು ಕಾಣಬಹುದು.
ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಎಸ್.ಎ. ಕೃಷ್ಣಯ್ಯ, ಹವ್ಯಾಸಿ ಇತಿಹಾಸ ಸಂಶೋಧಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ, ಶ್ರೀಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಾಲಯದ ಮುಖ್ಯಸ್ಥರಾದ ಸತೀಶ್ ಶೆಟ್ಟಿ ಹಾಗೂ ಸ್ಥಳೀಯರಾದ ಧನರಾಜ್ ಬೇಳೂರು ಮತ್ತು ಮಹೇಶ್ ಗುಳ್ಳಾಡಿ ಅವರು ಸಹಕಾರ ನೀಡಿದ್ದರು ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
