ಈಗ ನಕಲಿ ಸುದ್ದಿ ಯಾವುದು ಎಂದು ಕೇಂದ್ರ ಸರ್ಕಾರ ನಿರ್ಧರಿಸಲಿದೆ: ಕಪಿಲ್ ಸಿಬಲ್ ವಾಗ್ದಾಳಿ

ಹೊಸ ದಿಲ್ಲಿ: ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆಯಲ್ಲಿ ವಾಸ್ತವ ಪರಿಶೀಲನೆ ಅವಕಾಶ ಒದಗಿಸಿರುವುದರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ಈಗ ಕೇಂದ್ರ ಸರ್ಕಾರ ಯಾವುದು ನಕಲಿ ಸುದ್ದಿ ಎಂದು ನಿರ್ಧರಿಸಲಿದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲವೆಂದು" ಎಂದು ಕಿಡಿ ಕಾರಿದ್ದಾರೆ ಎಂದು ndtv.com ವರದಿ ಮಾಡಿದೆ.
ಇದಕ್ಕೂ ಮುನ್ನ, ಸರ್ಕಾರ ನಿಯೋಜಿಸುವ ವಾಸ್ತವ ಪರಿಶೀಲಕರು ಸುಳ್ಳು ಅಥವಾ ದಾರಿ ತಪ್ಪಿಸುವ ಮಾಹಿತಿ ಎಂದು ಗುರುತಿಸುವ ವಿಷಯಗಳನ್ನು ತೆಗೆಯಲು ವಿಫಲವಾದರೆ ಗೂಗಲ್, ಫೇಸ್‌ಬುಕ್ ಹಾಗೂ ಟ್ವಿಟರ್‌ನಂಥ ಅಂತರ್ಜಾಲ ಉದ್ಯಮಗಳು ಸುರಕ್ಷತಾ ನೀತಿಯನ್ವಯ ರಕ್ಷಣೆ ಕಳೆದುಕೊಳ್ಳಲಿವೆ ಎಂದು ಗುರುವಾರ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದರು.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, "ಈಗ ಯಾವುದು ನಕಲಿ, ಯಾವುದಲ್ಲ ಎಂಬುದನ್ನು ಪತ್ರಿಕಾ ಮಾಹಿತಿ ದಳ ನಿರ್ಧರಿಸಿ, ಅದರ ಕುರಿತು ಸೂಚನೆ ನೀಡಲಿದೆ. ಒಂದು ವೇಳೆ ಈ ಸೂಚನೆಯನ್ನು ನಿರ್ಲಕ್ಷಿಸಲು ಅಂತರ್ಜಾಲ ವೇದಿಕೆಗಳು ಬಯಸಿದರೆ, ಅವು ಶಿಕ್ಷೆಯಿಂದ ರಕ್ಷಣೆ ಕಳೆದುಕೊಳ್ಳಲಿವೆ" ಎಂದು ತಿಳಿಸಿದ್ದಾರೆ.
"ಈಗ ಸರ್ಕಾರ ಯಾವುದು ನಕಲಿ, ಯಾವುದಲ್ಲ ಎಂದು ನಿರ್ಧರಿಸಲಿದೆ ಹಾಗೂ ಅಮಿತ್ ಶಾ ಹೇಳುತ್ತಾರೆ ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲವೆಂದು" ಎಂದು ಅವರು ಕಿಡಿ ಕಾರಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಬ್ರಿಟನ್‌ನಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಶುಕ್ರವಾರ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದ ಅಮಿತ್ ಶಾ, ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ; ನಿಮ್ಮ ಕುಟುಂಬ ಹಾಗೂ ವಂಶಪಾರಂಪರ್ಯ ರಾಜಕಾರಣ ಅಪಾಯದಲ್ಲಿದೆ ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕಪಿಲ್ ಸಿಬಲ್ ಮೇಲಿನಂತೆ ವ್ಯಂಗ್ಯವಾಡಿದ್ದಾರೆ.
ಸರ್ಕಾರಕ್ಕೆ ಸಂಬಂಧಿಸಿದಂತೆ ಅಂತರ್ಜಾಲ ವೇದಿಕೆಗಳಲ್ಲಿನ ಸುಳ್ಳು ಮಾಹಿತಿ ಪ್ರಸರಣದ ಮೇಲೆ ಕಣ್ಣಿಡಲು ಸಂಸ್ಥೆಯೊಂದನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಯೋಜಿಸಲಿದೆ ಎಂದು ಸಚಿವ ಚಂದ್ರಶೇಖರ್ ತಿಳಿಸಿದ್ದರು. ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳು, 2021ರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದ ಸಚಿವರು, ವಾಸ್ತವ ಪರಿಶೀಲನೆ ಕುರಿತ ಕಾರ್ಯಗಳು ಇನ್ನೂ ಪ್ರಗತಿಯಲ್ಲಿವೆ ಎಂದೂ ಹೇಳಿದ್ದರು.







