ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿ. ಕಾರ್ಖಾನೆಯಿಂದ 4 ವರ್ಷಗಳಲ್ಲಿ 13 ಕೋಟಿ ರೂ.ಗಿಂತ ಅಧಿಕ CSR ನಿಧಿ ಬಿಡುಗಡೆ
ಆರ್‌ಟಿಐನಡಿ ಬಹಿರಂಗ

ಬೆಂಗಳೂರು: ರಾಜ್ಯ ಸರಕಾರದ ಒಡೆತನದಲ್ಲಿ ನಡೆಸಲಾಗುತ್ತಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಕಾರ್ಖಾನೆಯು 2018ರಿಂದ 2023ರವರೆಗೆ 13,77,54,567 ರೂ.ಗಳ ಸಿಎಸ್‌ಆರ್(ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯನ್ನು ಟ್ರಸ್ಟ್ಗಳಿಗೆ ಸೇರಿ ವಿವಿಧ ಸಂಸ್ಥೆಗಳಿಗೆ ಪಾವತಿ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.
ಕೆ.ಆರ್. ಪುರಂ ವಿಧಾನಸಭಾ ಶಾಸಕ ಬೈರತಿ ಬಸವರಾಜು ಅವರು ಕಾರ್ಖಾನೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದರೆ 2019ರಲ್ಲಿ ಸುಮಾರು 3,95,00,000 ರೂ.ಗಳನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಖಾನೆಯ ಸಿಎಸ್‌ಆರ್ ಅನುದಾನವನ್ನು ಮಂಜೂರು ಮಾಡಿಕೊಂಡಿದ್ದಾರೆ.
2018-19ನೆ ಸಾಲಿನಲ್ಲಿ 4 ಕೋಟಿ ಹಣವನ್ನು ಸಿಎಸ್‌ಆರ್ ಅನುದಾನದಡಿ ಕಾರ್ಖಾನೆಯು ಖರ್ಚು ಮಾಡಿದೆ. 2020-21ನೆ ಸಾಲಿನಲ್ಲಿ ಸುಮಾರು 3 ಕೋಟಿ ರೂ., 2021-22ನೆ ಸಾಲಿನಲ್ಲಿ 3.53 ಕೋಟಿ ರೂ. ಹಾಗೂ 2022-23ನೆ ಸಾಲಿನಲ್ಲಿ ಸುಮಾರು 2 ಕೋಟಿ ರೂ. ಹಣವನ್ನು ಸಿಎಸ್‌ಆರ್ ಅನುದಾನದಡಿ ಕಾರ್ಖಾನೆಯು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ನಿರ್ಮಿತಿ ಕೇಂದ್ರಕ್ಕೆ ಸುಮಾರು 3 ಕೋಟಿ ರೂ.ಗಿಂತ ಅಧಿಕ ಹಣವನ್ನು ಮಂಜೂರು ಮಾಡಿದ್ದು, ಅದರಲ್ಲಿ ಹೆಚ್ಚಿನ ಹಣವನ್ನು ದಾವಣಗೆರೆ ಜಿಲ್ಲೆಯ ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆಯಾಗಿದೆ. ಕಾರ್ಖಾನೆಯ ಬಹುತೇಕ ಸಿಎಸ್‌ಆರ್ ನಿಧಿಯನ್ನು ಶಾಲೆಗಳ ಅಭಿವೃದ್ಧಿಗಾಗಿಯೇ ನಿರ್ಮಿತಿ ಕೇಂದ್ರವು ಬಳಕೆ ಮಾಡಿಕೊಂಡಿದೆ. ಆರ್‌ಓ ಪ್ಲಾಂಟ್‌ಗಳ ಸ್ಥಾಪನೆಗೂ ಹೆಚ್ಚು ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಿಕೊಂಡಿದೆ.
2022ರಲ್ಲಿ ಅಕ್ಷಯ ಪತ್ರ ಪೌಂಡೇಶನ್‌ಗೆ 2,83,500 ರೂ.ಗಳನ್ನು ಹಾಗೂ ಹುಬ್ಬಳ್ಳಿಯ ಸುಬಾಷ್‌ನಗರದಲ್ಲಿರುವ ಯೋಗ ಮಂದಿರ ಕಾಮಗಾರಿಗೆ 7,50,000 ರೂ., ದಾವಣಗೆರೆಯ ರೆಡ್ ಕ್ರಾಸ್ ಸೊಸೈಟಿಗೆ 5 ಲಕ್ಷ ರೂ. ಹಣವನ್ನು ಮಂಜೂರು ಮಾಡಲಾಗಿದೆ. ಶಿಕಾರಿಪುರದ ಶಿರಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಿದ್ದ 1 ಲಕ್ಷ ರೂ. ಹಣವನ್ನು ವಾಪಸ್ಸು ಪಡೆಯಲಾಗಿದೆ ಎಂದು ಕಾರ್ಖಾನೆಯು ಮಾಹಿತಿಯನ್ನು ನೀಡಿದೆ.







