ಖರ್ಗೆ ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ಸಿದ್ಧ: ಡಿ.ಕೆ. ಶಿವಕುಮಾರ್

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ನನ್ನ ನಾಯಕರು, ಅವರ ಹಿರಿತನ, ತ್ಯಾಗಕ್ಕೆ ಗೌರವ ನೀಡಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆ ಕೈಕೆಳಗೆ ಕೆಲಸ ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ. ಖರ್ಗೆ ನಮ್ಮ ಪಕ್ಷದ ಆಸ್ತಿ. ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ನನಗಿಂತ ರಾಜಕೀಯದಲ್ಲಿ ದೊಡ್ಡವರು ಎಂದು ಡಿಕೆಶಿ ಹೇಳಿದ್ದಾರೆ.
ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದು, ಇದು ಕಾಂಗ್ರೆಸ್‍ನಲ್ಲಿ ಮಾತ್ರ ಸಾಧ್ಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಅಮುಲ್ ಹಾಗೂ ಮಹಾರಾಷ್ಟ್ರ ಗಡಿ ವಿಚಾರವಾಗಿ ಕೆಲವರು ಮಾತನಾಡುತ್ತಿಲ್ಲ. ಹೋರಾಟಗಾರರು ಹಾಗೂ ಕಲಾವಿದರೆಲ್ಲರೂ ಸುಮ್ಮನಿದ್ದಾರೆ. ಗಡಿ ಭಾಗದ ನಮ್ಮ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ ಘೋಷಿಸಿದೆ. ಇತಿಹಾಸದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ಸುಧಾಮ್ ದಾಸ್ ನೇಮಕ
ಸುಧಾಮ್ ದಾಸ್ ಅವರು ಇಡಿ ಜಂಟಿ ಅಧಿಕಾರಿಯಾಗಿದ್ದರು. ಅವರು ಸಮಾಜದ ರಕ್ಷಣೆಗೆ ದೊಡ್ಡ ಬಳಗ ಕಟ್ಟಿಕೊಂಡು ಸಮುದಾಯ ರಕ್ಷಣೆ ಮಾಡುತ್ತಿದ್ದರು. ಇವರನ್ನು ಪಕ್ಷದಲ್ಲಿ ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಎಂ.ಬಿ ಪಾಟೀಲ್ ಅಧ್ಯಕ್ಷರಾಗಿದ್ದು, ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಒತ್ತಡ ಹಾಕಬಾರದು ಎಂದು ಸುಧಾಮ್ ದಾಸ್ ಅವರನ್ನು ನೇಮಕ ಮಾಡಲಾಗುತ್ತಿದೆ. ಯುವಕರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ತೀರ್ಮಾನ ಮಾಡಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಲಿರುವ ಎಚ್.ವಿಶ್ವನಾಥ್
ಪಕ್ಷದಲ್ಲಿ ಹೊಸದಾಗಿ ಸಾಕಷ್ಟು ಮಂದಿ ಸೇರ್ಪಡೆಯಾಗುತ್ತಿದ್ದಾರೆ. ಸಹಜವಾಗಿ ಸಾಕಷ್ಟು ಒತ್ತಡ ನಮ್ಮ ಮೇಲೆ ಇದೆ. ಆದಷ್ಟು ಬೇಗ ಎಲ್ಲವನ್ನೂ ನಿವಾರಿಸಿಕೊಂಡು ಮೂರನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸೋಮವಾರ ಮಧ್ಯಾಹ್ನದ ನಂತರ ಮಾಜಿ ಸಚಿವ ಎಚ್.ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ನಾವು ರಾಹುಲ್ ಗಾಂಧಿ ಆಗಮಿಸಿದ ದಿನದಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಸಹ ಕೈಗೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.







