ಮಂಗಳೂರು: ನಿಷೇಧಿತ ‘ಎಂಡಿಎಂಎ’ ಮಾದಕ ವಸ್ತು ಸಹಿತ ಆರೋಪಿ ಸೆರೆ

ಮಂಗಳೂರು, ಎ.8: ನಗರದಲ್ಲಿ ಮಾರಾಟ ಮಾಡುವ ಸಲುವಾಗಿ ಬೆಂಗಳೂರಿನಿಂದ ಸಾಗಾಟ ಮಾಡುತ್ತಿದ್ದ ನಿಷೇಧಿತ ‘ಎಂಡಿಎಂಎ’ ಮಾದಕ ವಸ್ತು ಸಹಿತ ಆರೋಪಿಯನ್ನು ಸಿಸಿಬಿ ಮಂಗಳೂರು ಘಟಕ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಮೂಲದ ಅಬ್ದುಲ್ಲಾ ಸಿ. (39) ಬಂಧಿತ ಆರೋಪಿ.
ಈತ ಬೆಂಗಳೂರಿನಿಂದ ಕಾರಿನಲ್ಲಿ ನಗರಕ್ಕೆ ನಿಷೇಧಿತ ಮಾದಕ ವಸ್ತು ‘ಎಂಡಿಎಂಎ’ಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಘಟಕದ ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಆರೋಪಿಯಿಂದ 7.50 ಲಕ್ಷ ರೂ. ಬೆಲೆಯ 150 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್, 1,260 ರೂ. ವಶಪಡಿಸಿಕೊಂಡಿದ್ದಾರೆ. ಇವೆಲ್ಲದರ ಒಟ್ಟು ಮೌಲ್ಯ 17,61,260 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ ಈ ಹಿಂದೆ ವಿಶಾಖಪಟ್ಟಣದಲ್ಲಿ 45 ಕೆಜಿ ಗಾಂಜಾ ಹೊಂದಿದ್ದ ಬಗ್ಗೆ ಮತ್ತು ಕಾಸರಗೋಡಿನ ವಿದ್ಯಾನಗರದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು.
Next Story





