ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮಹಿಳಾ ನ್ಯಾಯಾಧೀಶರಿಗೆ ವರ್ಗಾಯಿಸಲು ದಿಲ್ಲಿ ಹೈಕೋರ್ಟ್ ನಕಾರ

ಹೊಸದಿಲ್ಲಿ, ಎ.9 : ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯನ್ನು ಪುರುಷ ನ್ಯಾಯಾಧೀಶರಿಂದ ಮಹಿಳಾ ನ್ಯಾಯಾಧೀಶರಿಗೆ ವರ್ಗಾಯಿಸಬೇಕೆಂಬ ಸಂತ್ರಸ್ತೆಯ ಮನವಿಯನ್ನು ದಿಲ್ಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ. ಒಂದು ವೇಳೆ ಈ ಮನವಿಯನ್ನು ಪುರಸ್ಕರಿಸಿದಲ್ಲಿ, ಇಂತಹ ವಿಷಯಗಳಿಗೆ ಸಂಬಂಧಿಸಿದ ಮನವಿಗಳ ಮಹಾಪೂರವೇ ಹರಿದುಬರುವ ಸಾಧ್ಯತೆಯಿದ್ದು, ಅವುಗಳನ್ನು ವಿಶೇಷ ನ್ಯಾಯಾಲಯಗಳಿಗೆ ವರ್ಗಾಯಿಸುವ ಪರಿಸ್ಥಿತಿಯುಂಟಾಗಬಹುದೆಂದು ಅದು ಹೇಳಿದೆ.
ಅರ್ಜಿದಾರೆಯ ಛಾಯಾಚಿತ್ರಗಳನ್ನು ಪೋರ್ನೋಗ್ರಫಿ (ಅಶ್ಲೀಲಚಿತ್ರ)ಜಾಲತಾಣದಲ್ಲಿ ದುರ್ಬಳಕೆ ಮಾಡಿದ ಪ್ರಕರಣವು ವಿಚಾರಣಾ ನ್ಯಾಯಾಲಯದಲ್ಲಿ ಆಲಿಕೆಗೆ ಬಾಕಿಯಿತ್ತು.
ಸಂತ್ರಸ್ತ ಮಹಿಳೆಯು ಇತ್ತೀಚೆಗೆ ಹೈಕೋರ್ಟ್ ಮೆಟ್ಟಲೇರಿ, ಪ್ರಕರಣವನ್ನು ಪೋಕ್ಸೊ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿದದರು. ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೆ ತನಗೆ ಹಿತವೆನಿಸುವುದಿಲ್ಲ ಮತ್ತು ನ್ಯಾಯಾಧೀಶರು ಸಂವೇದನಾರಹಿತರಾಗಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಮಹಿಳಾ ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶ ನೀಡುವಂತೆ ಅವರು ಕೋರಿದ್ದರು.
ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮಹಿಳಾ ನ್ಯಾಯಾಧೀಶರು ನಿರ್ವಹಿಸಬೇಕೆಂಬುದಾಗಿ ಭಾರತೀಯ ದಂಡಸಂಹಿತೆ ಸೆಕ್ಷನ್ 376 ( ಅತ್ಯಾಚಾರ)ರಡಿ ಯಾವುದೇ ಆದೇಶವಿಲ್ಲವೆಂದು ನ್ಯಾಯಮೂರ್ತಿ ಆನೀಶ್ ದಯಾಳ್ ನೇತೃತ್ವದ ಏಕಸದಸ್ಯ ನ್ಯಾಯಪೀಠ ತಿಳಿಸಿದೆ.
ಇಂತಹ ನೆಲೆಗಟ್ಟಿನಲ್ಲಿ ಪ್ರಕರಣಗಳ ವರ್ಗಾವಣೆಯಿಂದ ನ್ಯಾಯಾಲಯಗಳಿಗೆ ಪ್ರಕರಣಗಳ ಹಂಚಿಕೆ, ನಿರ್ವಹಣೆ ಮತ್ತು ಕಾರ್ಯವ್ಯಾಪ್ತಿಗೆ ಸಂಬಂಧಿಸಿ ತೊಂದರೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆಯೆಂದು ಹೈಕೋರ್ಟ್ ಹೇಳಿದೆ.
ಈ ದೃಷ್ಟಿಯಿಂದ ‘‘ ನ್ಯಾಯವನ್ನು ನೀಡುವುದು ಮಾತ್ರವಲ್ಲದೆ ನ್ಯಾಯ ದೊರೆಯುವಂತೆಯೂ ನೋಡಿಕೊಳ್ಳಬೇಕು’’ ಎಂಬ ಖ್ಯಾತ ನಾಣ್ಣುಡಿಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದವರು ಹೇಳಿದ್ದಾರೆ.
ಪ್ರಕರಣದ ಆರೋಪಿಯನ್ನು 2020ರ ನವೆಂಬರ್ 11ರಂದು ಬಂಧಿಸಲಾಗಿತ್ತು. ಆತನ ವಿರುದ್ಧ ಅತ್ಯಾಚಾರ ಹಾಗೂ ಭಾರತೀಯ ದಂಡ ಸಂಹಿತೆಯ 354 ಎ( ಲೈಂಗಿಕ ಕಿರುಕುಳ) ಹಾಗೂ 387 ( ಹಣ ಸುಲಿಗೆಯ ದುರುದ್ದೇಶದಿಂದ ವ್ಯಕ್ತಿಯನ್ನು ಸಾವಿನ ಅಥವಾ ಮಾರಣಾಂತಿಕ ಹಲ್ಲೆಯ ಭೀತಿಗೆ ದೂಡುವುದು) ಸೆಕ್ಷನ್ಗಳು ಮತ್ತು ಮಾಹಿತಿತಂತ್ರಜ್ಞಾನ ಕಾಯ್ದೆಯ ಸೆಕ್ಷನ್ಗಳಾದ 66ಇ( ಖಾಸಗಿತನದ ಉಲ್ಲಂಘನೆ ) ಮತ್ತು ಸೆಕ್ಷನ್ 67 ಎ (ಲೈಂಗಿಕ ದೃಶ್ಯಗಳನ್ನು ಒಳಗೊಂಡ ವಿಷಯಗಳ ಪ್ರಸಾರ ಅಥವಾ ಪ್ರಕಟಣೆಗೆ ದಂಡನೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.







