ಸಮರನೌಕೆ, ಯುದ್ಧವಿಮಾನಗಳೊಂದಿಗೆ ತೈವಾನ್ ಸುತ್ತುವರಿದ ಚೀನಾ

ಬೀಜಿಂಗ್, ಎ.8: ತೈವಾನ್ ಅಧ್ಯಕ್ಷೆ ಅಮೆರಿಕಕ್ಕೆ ಭೇಟಿ ನೀಡಿರುವುದರಿಂದ ಆಕ್ರೋಶಗೊಂಡಿರುವ ಚೀನಾವು ಸಮರನೌಕೆ, ಯುದ್ಧವಿಮಾನಗಳೊಂದಿಗೆ ತೈವಾನ್ ಗೆ ದಿಗ್ಬಂಧನ ವಿಧಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ವೆನ್ ಈ ವಾರ ಅಮೆರಿಕದಲ್ಲಿ ಅಲ್ಲಿನ ಸಂಸತ್ ಸ್ಪೀಕರ್ ಕೆವಿನ್ ಮೆಕಾರ್ಥಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ತೈವಾನ್ ಚೀನಾದ ಭೂಪ್ರದೇಶದ ವ್ಯಾಪ್ತಿಯೊಳಗೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಈ ನಡೆಗೆ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಮದ ಎಚ್ಚರಿಕೆ ನೀಡಿತ್ತು.
ಶನಿವಾರ ಚೀನಾದ 8 ಸಮರನೌಕೆ ಹಾಗೂ 42 ಯುದ್ಧವಿಮಾನಗಳು ದ್ವೀಪದ ಸುತ್ತ ಇರುವುದನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 29 ಜೆಟ್ವಿಮಾನಗಳು ತೈವಾನ್ನ ನೈಋತ್ಯ ವಾಯುರಕ್ಷಣಾ ವಲಯವನ್ನು ದಾಟಿವೆ ಎಂದು ತೈವಾನ್ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಚೀನೀ ಸೇನೆಯ ಪೂರ್ವ ವಲಯದ ಸೇನಾ ತುಕಡಿ(ಇ.ಟಿ.ಸಿ)ಯು ತೈವಾನ್ ಜಲಸಂಧಿಯಲ್ಲಿ ಯುದ್ಧ ಸನ್ನದ್ಧತೆ ವ್ಯಾಯಾಮವನ್ನು ಆರಂಭಿಸಿದ್ದು ದ್ವೀಪರಾಷ್ಟ್ರವನ್ನು ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ಸುತ್ತುವರಿದಿದೆ. ದೀರ್ಘಶ್ರೇಣಿಯ ರಾಕೆಟ್, ಫಿರಂಗಿದಳ, ವಿನಾಶಕಗಳು, ಯುದ್ಧನೌಕೆಗಳು, ಕ್ಷಿಪಣಿ ದೋಣಿಗಳು, ಫೈಟರ್ ಗಳು, ಬಾಂಬರ್ಗಳು, ಇಲೆಕ್ಟ್ರಾನಿಕ್ಸ್ ಯುದ್ಧವಿಮಾನಗಳು, ವೈಮಾನಿಕ ಟ್ಯಾಂಕರ್ಗಳು ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳು ಸಮರಾಭ್ಯಾಸದಲ್ಲಿ ಒಳಗೊಂಡಿವೆ. ಎಪ್ರಿಲ್ 8ರಿಂದ 10ರವರೆಗೆ ನಡೆಯಲಿರುವ ಈ ಸಮರಾಭ್ಯಾಸವು 2022ರ ಆಗಸ್ಟ್ ಬಳಿಕ ಚೀನೀ ಸೇನೆ ನಡೆಸುತ್ತಿರುವ ಅತೀ ದೊಡ್ಡ ಸಮರಾಭ್ಯಾಸವಾಗಲಿದೆ.
ಈ ಸಮರಾಭ್ಯಾಸವು ತೈವಾನ್ನ ಸ್ವಾತಂತ್ರ್ಯ `ಪ್ರತ್ಯೇಕತಾವಾದಿ ಶಕ್ತಿಗಳಿಗೆ' ಮತ್ತು ಅವರು ಸಂಪರ್ಕ ಹೊಂದಿರುವ ಬಾಹ್ಯಶಕ್ತಿಗಳಿಗೆ ಕಟ್ಟುನಿಟ್ಟಾದ ಎಚ್ಚರಿಕೆಯಾಗಿದೆ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೆ ಈ ನಡೆ ಅನಿವಾರ್ಯವಾಗಿದೆ ಎಂದು ಚೀನಾದ ರಕ್ಷಣಾ ಇಲಾಖೆ ಹೇಳಿದೆ.







