ಅಮುಲ್ ಪ್ರವೇಶ ವಿರೋಧಿಸಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ಪತ್ರ ಬರೆಯಲು ಕೆಎಂಎಫ್ ನಿರ್ಧಾರ
► ಅಮುಲ್ ವಿರುದ್ಧ ಪ್ರತಿಪಕ್ಷಗಳು,ರೈತರು, ಸಾಮಾಜಿಕ ಹೋರಾಟಗಾರರ ತೀವ್ರ ಆಕ್ರೋಶ ► ಸಾಮಾಜಿಕ ತಾಣಗಳಲ್ಲಿ ಮುಂದುವರೆದ 'ನಂದಿನಿ ಉಳಿಸಿ' ಅಭಿಯಾನ

ಬೆಂಗಳೂರು: ಗುಜರಾತ್ ಮೂಲದ ಹಾಲು ಸಹಕಾರಿ ಸಂಘ ಅಮುಲ್, ಬೆಂಗಳೂರಿನ ಹಾಲು ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿರುವುದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡಿಗರ ಹೆಮ್ಮೆಯ ಆಸ್ತಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ದ ಜನಪ್ರಿಯ ನಂದಿನಿ ಹಾಲಿನ ಉತ್ಪನ್ನಗಳಿಗೆ ಪ್ರತಿಸ್ಪರ್ಧಿಯಾಗಿ ಅಮುಲ್ ನ ಪ್ರವೇಶವು ರಾಜ್ಯದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ನಂದಿನಿ ಉಳಿಸಿ’ಅಭಿಯಾನ ಆರಂಭಗೊಂಡಿದ್ದು ಭಾರೀ ಬೆಂಬಲ ವ್ಯಕ್ತವಾಗಿದೆ.
ಅಮುಲ್ ಜೊತೆಗಿನ ಪೈಪೋಟಿಯಲ್ಲಿ ನಂದಿನಿಗೆ ನಷ್ಟವಾದಲ್ಲಿ ರಾಜ್ಯದ 1 ಕೋಟಿಗೂ ಅಧಿಕ ಜನರು ಬೀದಿಗೆ ಬೀಳಲಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಉಳಿದಿರುವ ಸಂದರ್ಭದಲ್ಲಿಯೇ ಅಮುಲ್ ಈ ಘೋಷಣೆ ಮಾಡಿರುವುದು ಹಲವಾರು ಸಂದೇಹಗಳನ್ನು ಹುಟ್ಟುಹಾಕಿದೆ. ಸಾವಿರಾರು ಕೋಟಿ ರೂ. ಆದಾಯವನ್ನು ಹೊಂದಿರುವ ಕೆಎಂಎಫ್ ಅನ್ನುಅಮುಲ್ ನಲ್ಲಿ ವಿಲೀನಗೊಳಿಸುವ ಸಂಚಿನ ಆರಂಭಿಕ ಹಂತ ಇದಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಹಾಲು ಮಾರುಕಟ್ಟೆಗೆ ಅಮುಲ್ ನ ಆಗಮನದಿಂದ ತಾವು ಅಸಂತುಷ್ಟಗೊಂಡಿರುವುದಾಗಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರವಾಗಿ ತಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ)ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಬೆಂಗಳೂರು ನಗರಕ್ಕೆ ಹಾಲು ಹಾಗೂ ಮೊಸರನ್ನು ಪೂರೈಕೆ ಮಾಡುವುದಾಗಿ ಅಮುಲ್ ಮಂಗಳವಾರ ಪ್ರಕಟಿಸಿದ್ದು, ಇದಕ್ಕೆ ಪ್ರತಿಪಕ್ಷ ನಾಯಕರು, ಸಾಮಾಜಿಕ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ನಂದಿನಿ ಬ್ರಾಂಡ್ ಅನ್ನು ‘ಮುಗಿಸಿ ಬಿಡುವ’ ನಡೆ ಇದಾಗಿದೆಯೆಂದು ಅವರು ಆರೋಪಿಸಿದ್ದರು.
‘‘ಕ್ಷೀರ ಸಮೃದ್ಧ ರಾಜ್ಯವಾದ ಕರ್ನಾಟಕದಲ್ಲಿ ಎರಡು ಯಶಸ್ವಿ ಹಾಲು ಉತ್ಪಾದಕ ಸಹಕಾರಿ ಸಂಸ್ಥೆಗಳು ಪರಸ್ಪರ ಸ್ಪರ್ಧಿಸುವುದರಲ್ಲಿ ಹಾಗೂ ಪರಸ್ಪರ ಉದ್ಯಮ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವುದು ವಿವೇಕಯುತವಾದುದಲ್ಲ. ಅದರ ಬದಲಿಗೆ ಹಾಲಿನ ಪೂರೈಕೆಯ ಕೊರತೆಯಿರುವ ರಾಜ್ಯಗಳ ಮಾರುಕಟ್ಟೆಯನ್ನು ಅಮುಲ್ ಪ್ರವೇಶಿಸಬೇಕಾಗಿದೆ’’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕೆಎಂಎಪ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ಅಮುಲ್ ಹಾಲು ಉದ್ಯಮವು ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ಅವಕಾಶ ನೀಡದಂತೆ ಎನ್ಡಿಡಿಬಿ ಪತ್ರ ಬರೆಯಲು ಕೆಎಂಎಫ್ ಯೋಚಿಸುತ್ತಿದೆ. ನಂದಿನಿಯ ಭವಿಷ್ಯದ ಪ್ರಶ್ನೆಯೂ ಇದಾಗಿದೆ. ನಂದಿನಿಯ ಭವಿಷ್ಯ ಅಳಿದುಹೋಗುವುದಕ್ಕೆ ಆಸ್ಪದ ನೀಡಲಾರೆವು ಎಂದವರು ಹೇಳಿದ್ದಾರೆ. ಹಾಲು ಸಹಕಾರಿ ಸಂಸ್ಥೆಗಳು ಪರಸ್ಪರರ ತವರು ಮಾರುಕಟ್ಟೆಯನ್ನು ಪ್ರವೇಶಿಸಬಾರದೆಂಬ ಅಲಿಖಿತ ಕಾನೂನನ್ನು ಅಮುಲ್ ಮುರಿದಿದೆ ಎಂದು ಕೆಎಂಎಫ್ ಮೂಲಗಳು ಅಸಮಾಧಾನ ವ್ಯಕ್ತಪಡಿಸಿವೆ.
25 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ಹೊಂದಿರುವ ನಂದಿನಿಯು ಹಾಲು ಉತ್ಪಾದನೆಯ, ಸಂಸ್ಕರಣೆ ಹಾಗೂ ವಿತರಣೆಯ ಅತಿ ದೊಡ್ಡ ಜಾಲವನ್ನು ಹೊಂದಿದೆ. ಕರ್ನಾಟಕದ 26 ಲಕ್ಷಕ್ಕೂ ಅಧಿಕ ರೈತರಿಗೆ ಕೆಎಂಎಫ್ ಜೀವನಾಧಾರವಾಗಿದೆ. ದೇಶದಲ್ಲಿ ಆಮುಲ್ ಆನಂತರದ ಎರಡನೆ ಅತಿ ದೊಡ್ಡ ಹಾಲು ಸಹಕಾರಿ ಸಂಘವೆನಿಸಿಕೊಂಡಿದೆ.







