ತಮಿಳುನಾಡು: ದಲಿತರಿಗೆ ದೇವಾಲಯ ಪ್ರವೇಶ ನಿಷೇಧ; ಘರ್ಷಣೆ

ಚೆನ್ನೈ, ಎ. 8: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಲಿಯನೂರು ಸಮೀಪದ ಮೇಲ್ಪತಿ ಗ್ರಾಮದಲ್ಲಿರುವ ದ್ರೌಪದಿ ಅಮ್ಮನ್ ದೇವಾಲಯ ಪ್ರವೇಶಿಸಲು ದಲಿತರಿಗೆ ಪ್ರಬಲ ಸಮುದಾಯದವರು ತಡೆ ಒಡ್ಡಿದ ಘಟನೆ ನಡೆದಿದೆ.
ಪರಿಶಿಷ್ಟ ಜಾತಿಯಾದ ಕಂಧನ್, ಕಥಿರ್ವಾನ್ ಹಾಗೂ ಕುರ್ಪಗಂಗೆ ಸೇರಿದ ಜನರು ಉತ್ಸವದ ಹಿನ್ನೆಲೆಯಲ್ಲಿ ದ್ರೌಪದಿ ಅಮ್ಮನ್ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಪ್ರಬಲ ಜಾತಿಯ ಜನರು ಅವರ ಪ್ರವೇಶಕ್ಕೆ ತಡೆ ಒಡ್ಡಿದರು. ಅಲ್ಲದೆ, ದೇವಾಲಯದಿಂದ ಹೊರಗೆ ಹೋಗುವಂತೆ ಹಾಗೂ ಹೊರಗಡೆ ಪ್ರಾರ್ಥಿಸುವಂತೆ ಸೂಚಿಸಿದರು ಎನ್ನಲಾಗಿದೆ.
ಇದರಿಂದ ಪ್ರಬಲ ಜಾತಿಯ ಜನರು ಹಾಗೂ ದಲಿತರ ನಡುವೆ ವಾಗ್ವಾದ ನಡೆದು, ಘರ್ಷಣೆಗೆ ತಿರುಗಿತು. ಪ್ರಬಲ ಜಾತಿಯ ಜನರು ದಲಿತರಿಗೆ ಥಳಿಸಿದರು. ಘರ್ಷಣೆಯಲ್ಲಿ ಗಾಯಗೊಂಡ ದಲಿತರನ್ನು ಚಿಕಿತ್ಸೆಗಾಗಿ ಮುಂಡಿಯಪ್ಪಕ್ಕಂನಲ್ಲಿರುವ ಸರಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಘಟನೆಯ ಬಳಿಕ ಮೇಲ್ಪತಿಯ ದಲಿತ ನಿವಾಸಿಗಳು ವಿಕ್ರವಂಡಿ-ಕುಂಭಕೋಣಂ ರಸ್ತೆಯಲ್ಲಿ ಎಪ್ರಿಲ್ 7ರಂದು ಪ್ರತಿಭಟನೆ ನಡೆಸಿದರು. ಸುಮಾರು 100ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ ದಲಿತರು ಪ್ರಬಲ ಜಾತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ವಲವನೂರು ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಮೇಲ್ಪತಿಯ ದಲಿತ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ದಲಿತರು ಪಿತೂರಿಗಾರರ ವಿರುದ್ಧ ಪ.ಜಾ., ಪ.ಪಂ. ದೌರ್ಜನ್ಯ ತಡೆ ಕಾಯ್ದಿ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಪೊಲೀಸರು ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಅನಂತರ ಕೆಲವು ಗಂಟೆಗಳ ಬಳಿಕ ಪ್ರತಿಭಟನಕಾರರು ಚದುರಿದರು.
Dalits from Melpathi village near Koliyanur in Tamil Nadu’s #Villupuram district picketed a road on Vikravandi-Kumbakonam road on the night of Friday after a few Dalits were denied to enter into a local temple and allegedly beaten up by caste Hindus. #CasteDiscrimination pic.twitter.com/xkfeDUZd7k
— Nithya (@NityaPandian) April 8, 2023







