ಪಕ್ಷಪಾತಿ ಅಜೆಂಡಾ: ಪಠ್ಯಪುಸ್ತಕ ಬದಲಾವಣೆ ವಿರುದ್ಧ 250 ಇತಿಹಾಸಕಾರರಿಂದ ಟೀಕೆ

ಹೊಸದಿಲ್ಲಿ: ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಹಲವು ಭಾಗಗಳನ್ನು ಕಿತ್ತುಹಾಕಿರುವ ಕ್ರಮವನ್ನು ದೇಶದ 250ಕ್ಕೂ ಹೆಚ್ಚು ಮಂದಿ ಖ್ಯಾತ ಇತಿಹಾಸ ತಜ್ಞರು ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಅನ್ನು ಅಸ್ತ್ರವಾಗಿಟ್ಟುಕೊಂಡು ಮೊಘಲ್ ಆಸ್ಥಾನ, 2002ರ ಗುಜರಾತ್ ಕೋಮುಗಲಭೆ, ತರ್ತು ಪರಿಸ್ಥಿತಿ, ದಲಿತ ಲೇಖಕರ ಉಲ್ಲೇಖ, ನಕ್ಸಲೀಯ ಚಳವಳಿ ಮತ್ತು ಸಮಾನತೆಗಾಗಿ ಹೋರಾಟದಂಥ ಅಂಶಗಳನ್ನು 6ರಿಂದ 12ನೇ ತರಗತಿವರೆಗಿನ ಸಮಾಜವಿಜ್ಞಾನ, ಇತಿಹಾಸ ಹಾಗೂ ರಾಜಕೀಯ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳಿಂದ ಕಿತ್ತುಹಾಕಲಾಗಿದೆ ಎಂದು ಇತಿಹಾಸಕಾರರು ಹೇಳಿಕೆ ನೀಡಿದ್ದಾರೆ.
ದೆಹಲಿ ವಿವಿಯ ನಿವೃತ್ತ ಪ್ರೊಫೆಸರ್ ಅನಿತಾ ರಾಂಪಾಲ್, ಲೇಖಕ ಬದ್ರಿ ರೈನಾ ಹಾಗೂ ಇತಿಹಾಸಕಾರ ಇರ್ಫಾನ್ ಹಬೀಬ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಆಕ್ಷೇಪ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕಗಳ ಸೂಕ್ಷ್ಮ ವಿಷಯಗಳನ್ನು ಕಿತ್ತುಹಾಕಿರುವುದು ಭಾರತ ಉಪಖಂಡದ ಜನತೆಯ ಇತಿಹಾಸವನ್ನು ತಪ್ಪಾಗಿ ಸೃಷ್ಟಿಸುವ ಪ್ರಸಕ್ತ ಕೇಂದ್ರ ಸರ್ಕಾರದ ವಿಸ್ತೃತ ಸೈದ್ಧಾಂತಿಕ ಕಾರ್ಯಸೂಚಿಯ ಪ್ರತೀಕ ಎಂದು ಪ್ರತಿಪಾದಿಸಿದ್ದಾರೆ. ಇದು ಏಕ (ಹಿಂದೂ) ಸಂಪ್ರದಾಯದ ಪರಿಣಾಮ ಎಂದು ಟೀಕಿಸಿದ್ದಾರೆ.
ಈ ಹೇಳಿಕೆಗೆ ಸಹಿ ಮಾಡಿರುವ ಬಹುತೇಕ ಮಂದಿ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಿದ್ದಾರೆ. ಸಾಂಕ್ರಾಮಿಕ ಬಳಿಕದ ಅವಧಿಯಲ್ಲಿ ಶಾಲಾ ಶಿಕ್ಷಣ ಸಹಜ ಸ್ಥಿತಿಗೆ ಮರಳಿ ಆನ್‌ಲೈನ್ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಹೊಸ ಪಠ್ಯಪುಸ್ತಕಗಳ ಪರಿಷ್ಕೃತ ಆವೃತ್ತಿಯಲ್ಲಿ ಇಂಥ ವಿಷಯಗಳನ್ನು ಕಿತ್ತುಹಾಕಲಾಗಿದೆ ಎಂದು ಹೇಳಿದ್ದಾರೆ.







