ಟೋಲ್ ವ್ಯವಸ್ಥೆಯನ್ನು ಸುಗಮ ಸುಸೂತ್ರಗೊಳಿಸಿದ್ದು
ಟೋಲ್ಗತೆ ನೀಳ್ಗತೆ

►► ಸರಣಿ 3
ಭಾರತದಾದ್ಯಂತ ಟೋಲ್ ಗೇಟ್‌ಗಳು ಮತ್ತು ಅಲ್ಲಿನ ಲೂಟಿಗಳು ಸದ್ದು ಮಾಡುತ್ತಿವೆ. ಮಂಗಳೂರಿನಲ್ಲಿ ತಿಂಗಳುಗಳ ತನಕ ನಡೆದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಹೋರಾಟ, ಮೈಸೂರಿನಲ್ಲಿ ಮನಸೋಇಚ್ಛೆ ಟೋಲ್ ದರದ ವಿರುದ್ಧ ಹೋರಾಟ ಹೀಗೆ ಜನಸಾಮಾನ್ಯರು ನಿಧಾನವಾಗಿ ಟೋಲ್ ಲೂಟಿಯ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಆದರೆ ಹೆಚ್ಚಿನವರಿಗೆ ಯಾಕೆ ಹೀಗೆ ರಸ್ತೆ ಸುಂಕ ಹಠಾತ್ತಾಗಿ ಮೈಮೇಲೆ ಬಂದು ಎರಗಿದೆ ಎಂಬುದು ಅರ್ಥವಾಗಿಲ್ಲ. ಈ ಮಹಾಖಾಸಗೀಕರಣ ಹಲವು ಚುಕ್ಕಿಗಳ ಚಿತ್ರ. ಪ್ರಭುತ್ವ ಅಲ್ಲಲ್ಲಿ ಹಾಕುತ್ತಾ ಬಂದಿರುವ ಹಲವು ಚುಕ್ಕಿಗಳನ್ನು ಜೋಡಿಸಿದಾಗ ಪೂರ್ಣ ಚಿತ್ರ ಅರ್ಥಾತ್ ಮಹಾಖಾಸಗೀಕರಣದ ವಿಶ್ವರೂಪ ಕಾಣಿಸುವ ಕಥೆ.
ಕುತೂಹಲಕರ ಸಂಗತಿ ಎಂದರೆ, ಭಾರತದಲ್ಲಿ ರಸ್ತೆ ಮೂಲಸೌಕರ್ಯಗಳಲ್ಲಿ ಖಾಸಗಿ ಹೂಡಿಕೆಗೆ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಚಾಲನೆ ದೊರೆತಾಗ ಪ್ರಧಾನಮಂತ್ರಿ ಆಗಿದ್ದವರು ಇಂದರ್ ಕುಮಾರ್ ಗುಜ್ರಾಲ್! ಅವರದು ದೇವೇಗೌಡರ ರಾಜೀನಾಮೆಯ ಬಳಿಕ ಬಂದ ಯುನೈಟೆಡ್ ಫ್ರಂಟ್ ಸರಕಾರ. ಇನ್ನೂ ಕುತೂಹಲಕರ ಸಂಗತಿ ಎಂದರೆ, ಟೋಲ್ ರಸ್ತೆಗಳ ಕುರಿತು ಆಸಕ್ತಿ ತಳೆದು, ಅದಕ್ಕೊಂದು ರೂಪಕೊಟ್ಟದ್ದು ರಾಜಕಾರಣಿಗಳಲ್ಲ, ಬದಲಾಗಿ ಆಗ ಪ್ರೊ ಆಕ್ಟಿವ್ ಆಗಿದ್ದ ಅಧಿಕಾರಶಾಹಿ ವ್ಯವಸ್ಥೆ. ಇದು ಹೇಗೆಂದು ಸ್ವಲ್ಪವಿವರವಾಗಿ ನೊಡೋಣ.
ಗುಜ್ರಾಲ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಅಂದಿನ ಭೂತಳ ಪರಿವಹನ ಇಲಾಖೆ (ಸರ್ಫೇಸ್ ಟ್ರಾನ್ಸ್‌ಪೋರ್ಟ್)ಯ ಸಚಿವರಾಗಿದ್ದವರು ಡಿಎಂಕೆ ಪಕ್ಷದ ತಿಂಡಿವನಂ ಜಿ. ವೆಂಕಟರಾಮನ್. ಆ ಇಲಾಖೆಗೆ ಕಾರ್ಯದರ್ಶಿಗಳಾಗಿದ್ದವರು, ಎಸ್. ಸುಂದರ್ (ಅವರು 2021ರಲ್ಲಿ ಕೋವಿಡ್‌ಗೆ ಬಲಿಯಾದರು). ಲಂಡನ್‌ನ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್‌ನಲ್ಲಿ ಉನ್ನತಾಧಿಕಾರಿಯಾಗಿದ್ದ ಸುಂದರ್ ಅವರಿಗೆ, ಇಂಗ್ಲೆಂಡಿನಲ್ಲಿ ರಸ್ತೆ-ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯ ಮಾಡೆಲ್ ಆಸಕ್ತಿಕರ ಅನ್ನಿಸಿತ್ತು. ಅಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರಿಂದಾಗಿ, ಅವರಿಗೆ ಅದರ ಒಳಹೊರಗುಗಳೂ ಅರಿವಿದ್ದವು. ನಿಷ್ಠಾವಂತ ಅಧಿಕಾರಿ ಆಗಿದ್ದ ಅವರು, ಸ್ವಂತ ಆಸಕ್ತಿಯಿಂದ ಭಾರತದಲ್ಲೂ ಖಾಸಗಿ ಹೂಡಿಕೆಗೆ ಸಾಧ್ಯತೆಗಳು, ಕಾನೂನಿನ ಸಾಧ್ಯತೆ-ಬಾಧ್ಯತೆಗಳನ್ನೆಲ್ಲ ಗಮನಿಸಿ ವಿವರಗಳನ್ನು ಸಿದ್ಧಪಡಿಸಿಕೊಂಡಿದ್ದರು ಮತ್ತು 1995ರಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ತಿದ್ದುಪಡಿಗೂ ಹಿನ್ನೆಲೆಯ ಕಾರಣಕರ್ತರಲ್ಲಿ ಒಬ್ಬರಾಗಿದ್ದರು.
ಮೊದಮೊದಲು ಸಣ್ಣ ಪ್ರಮಾಣದಲ್ಲಿ ಬೈಪಾಸ್ ರಸ್ತೆಗಳಿಗೆ ಆರಂಭಗೊಂಡ ಈ ಟೋಲ್ ವ್ಯವಸ್ಥೆಯನ್ನು ನಗರದಲ್ಲಿ ವಾಹನದಟ್ಟಣೆಯ ನಡುವೆ ನಿಧಾನವಾಗಿ ಸಾಗಬೇಕಾಗಿದ್ದ ವಾಣಿಜ್ಯ ವಾಹನಗಳು ಸ್ವಾಗತಿಸಿದ್ದವು ಮತ್ತು ಟೋಲ್ ರಸ್ತೆಯಲ್ಲಿ ಹಣ ನೀಡಿ ವೇಗವಾಗಿ ಗಮ್ಯ ತಲುಪುವುದು ಲಾಭದಾಯಕ ಎಂದು ಕಂಡುಕೊಂಡಿದ್ದವು. ಈ ಯಶಸ್ಸನ್ನು ಅಂತರ್ ನಗರ ಹೆದ್ದಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಬಳಸುವುದಕ್ಕೆ ಟೋಲ್ ದರ ನಿಗದಿ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿತ್ತು. ಆಗ ಸುಂದರ್ ಅವರಿಗೆ ಸಹಾಯಕ್ಕೆ ಬಂದವರು, ಹಣಕಾಸು ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಗಜೇಂದ್ರ ಹಾಲ್ದಿಯಾ.
ಒಂದು ರಸ್ತೆಗೆ ತಗಲಿದ ವೆಚ್ಚವನ್ನು ಒಂದು ನಿಗದಿತ ಅವಧಿಯೊಳಗೆ ವಾಹನಗಳ ಚಾಲಕರಿಂದ ಸುಂಕದ ಮೂಲಕವೇ ವಸೂಲಿ ಮಾಡಲು ಹೊರಟರೆ, ಅದು ಸಣ್ಣ ರಸ್ತೆಗಳಿಗೆ ನಡೆದೀತೇ ಹೊರತು ದೂರದ ನಗರಗಳನ್ನು ಸಂಪರ್ಕಿಸುವ ದೊಡ್ಡ ಗಾತ್ರದ ಹೆದ್ದಾರಿ ಯೋಜನೆಗಳಿಗೆ ಅದು ಬಹಳ ದುಬಾರಿ ಆಗಬಹುದು. ಹಾಗಾಗಿ, ಜನರು ಪಾವತಿಸಲು ಅನುಕೂಲವಾಗುವ ಪ್ರಮಾಣದಲ್ಲಿ ಕಿಲೋಮೀಟರ್ ಒಂದರ ಇಂತಿಷ್ಟು ಎಂಬ ಸೂತ್ರವನ್ನನುಸರಿಸಿ ಸುಂಕ ನಿಗದಿ ಮಾಡಬೇಕು ಮತ್ತು ಆ ಸುಂಕವನ್ನು ಕಾಲ ಕಳೆದಂತೆ ಹಣದುಬ್ಬರದ ಸೂಚ್ಯಂಕಕ್ಕೆ ಅನುಗುಣವಾಗಿ ಹೆಚ್ಚು-ಕಡಿಮೆ ಮಾಡಬಹುದು ಎಂದು ಹೊಸ ಸೂತ್ರವನ್ನು ಹಾಲ್ದಿಯಾ ಮುಂದಿಟ್ಟರು. ಜೊತೆಗೇ, ಸರಕಾರದ ಕಡೆಯಿಂದ ಸ್ವಲ್ಪಆರಂಭಿಕ ಬಂಡವಾಳ ಹೂಡಬೇಕು, ಉಳಿದದ್ದನ್ನು ಖಾಸಗಿ ಹೂಡಿಕೆದಾರರೇ ತಮ್ಮ ಹಣದಿಂದ ಹೂಡಿ ರಸ್ತೆ ಪೂರ್ಣಗೊಳಿಸಿ, ನಿರ್ವಹಿಸಬೇಕು. ಸರಕಾರದ ಕಡೆಯಿಂದ ಆಗುವ ಹೂಡಿಕೆ ಸಬ್ಸಿಡಿಯನ್ನು ಟೆಂಡರಿನ ವೇಳೆ ಬಿಡ್ಡಿಂಗಿಗೆ ಮಾನದಂಡವಾಗಿರಿಸಿ, ಯಾರು ಅತ್ಯಂತ ಕಡಿಮೆ ಬಂಡವಾಳ ಸಬ್ಸಿಡಿ ಸಾಕೆನ್ನುತ್ತಾರೋ ಅವರಿಗೆ ಟೆಂಡರ್ ಮಂಜೂರಾಗಬೇಕು ಎಂಬ ಪಿಪಿಪಿ ಸೂತ್ರವನ್ನೂ ಅವರು ಸಿದ್ಧಪಡಿಸಿಕೊಟ್ಟರು. ಸರಕಾರಕ್ಕೆ ಬಂಡವಾಳ ಸಬ್ಸಿಡಿ ಹೊರೆ ಹೌದಾದರೂ, ಪೂರ್ಣ ರಸ್ತೆ ಯೋಜನೆಗೆ ಹೂಡುವ ಹಣಕ್ಕೆ ಹೋಲಿಸಿದರೆ ಅದು ತೀರಾ ಕಡಿಮೆ ಎಂಬುದು ಅವರ ಚಿಂತನೆಯಾಗಿತ್ತು.
ಈ ರೀತಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣಗೊಂಡ ದೇಶದ ಮೊತ್ತಮೊದಲ ದೊಡ್ಡ ಅಂತರ್ ನಗರ ಹೆದ್ದಾರಿ ಎಂದರೆ ರಾಜಸ್ಥಾನದ ಜೈಪುರದಿಂದ ಕಿಶನ್‌ಗಂಜನ್ನು ಸಂಪರ್ಕಿಸುವ 550ಕಿ.ಮೀ. ಉದ್ದದ ಹೆದ್ದಾರಿ. ಎರಡು ಲೇನ್‌ಗಳ ಸಾಧಾರಣ ಹೆದ್ದಾರಿ ಆಗಿದ್ದ ಅದನ್ನು ಆರು ಲೇನ್‌ಗಳ ಹೆದ್ದಾರಿಯಾಗಿ ಈ ಯೋಜನೆಯ ಅಡಿಯಲ್ಲಿ ಪರಿವರ್ತಿಸಲಾಯಿತು. ಬಿ.ಒ.ಟಿ. (ಬಿಲ್ಡ್-ಆಪರೇಟ್-ಟ್ರಾನ್ಸ್ ಫರ್) ಸೂತ್ರದಡಿ 20 ವರ್ಷಗಳ ಟೋಲ್ ಸಂಗ್ರಹ ಒಪ್ಪಂದ (ಕನ್ಸೆಷನರ್ ಅಗ್ರಿಮೆಂಟ್) ಮಾಡಿಕೊಂಡು ಈ ಯೋಜನೆ ಪೂರ್ಣಗೊಂಡಿತು.
ಬಹಳ ಕುತೂಹಲಕರ ಸಂಗತಿ ಎಂದರೆ, ಈ ಯೋಜನೆಯನ್ನು ಅಂತಿಮಗೊಳಿಸಿದ್ದು ಇಂದರ್ ಕುಮಾರ್ ಗುಜ್ರಾಲ್ ಅವರ ಯುನೈಟೆಡ್ ಫ್ರಂಟ್ ಸರಕಾರ; ಯೋಜನೆಯನ್ನು ಗುತ್ತಿಗೆದಾರರಿಗೆ ಅವಾರ್ಡ್ ಮಾಡಿ ಕೆಲಸ ಆರಂಭಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರಕಾರ; ಮತ್ತು ಕಡೆಗೆ 2005ರಲ್ಲಿ ಈ ಯೋಜನೆ ಪೂರ್ಣಗೊಳಿಸಿದ್ದು ಡಾ.ಮನಮೋಹನ್‌ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ!
ಮುಂಬೈ-ಪುಣೆ ನಡುವೆ ಸುಮಾರು 95 ಕಿ.ಮೀ. ಉದ್ದದ ಯಶವಂತ್ ರಾವ್ ಚವಾಣ್ ಎಕ್ಸ್‌ಪ್ರೆಸ್‌ವೇ ದೇಶದ ಮೊತ್ತ ಮೊದಲ ಟೋಲ್ ಸಹಿತ ಆರು ಲೇನ್‌ಗಳ ಎಕ್ಸ್‌ಪ್ರೆಸ್ ವೇ. ಆದರೆ ಅದು ಮಹಾರಾಷ್ಟ್ರ ರಾಜ್ಯ ಸರಕಾರದ ಅಧೀನದಲ್ಲಿರುವ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಎಂಎಸ್‌ಆರ್‌ಡಿಸಿ) ಮೂಲಕ ಬಿ.ಒ.ಟಿ. ತತ್ವದಡಿ ಆರಂಭಗೊಂಡ ಯೋಜನೆ. 1990ರಲ್ಲಿ ಆರಂಭಗೊಂಡ ಯೋಜನೆ ಮುಕ್ತಾಯಗೊಂಡುದು, 2002 ರಲ್ಲಿ. ದೇಶದ ಅತ್ಯಂತ ವ್ಯಸ್ಥ ಮತ್ತು ಲಾಭದಾಯಕ ವ್ಯವಹಾರವಾಗಿ ನಡೆಯುತ್ತಿರುವ ಹೆದ್ದಾರಿಗಳಲ್ಲಿ ಇದೂ ಒಂದು.







