ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಮತ್ತೆ ವಾಗ್ದಾಳಿ: ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಣೆ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ವಿರುದ್ಧ ಮತ್ತೊಂದು ಸುತ್ತಿನ ದಾಳಿ ನಡೆಸಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (Sachin Pilot), ಮಂಗಳವಾರ ಭ್ರಷ್ಟಾಚಾರದ ವಿರುದ್ಧ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ. ವಸುಂಧರ ರಾಜೆ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಗೆಹ್ಲೋಟ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳು ಹಾಗೂ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸುವುದು ಅನಿವಾರ್ಯವಾಗಿದೆ. ಆದರೆ, ಸರ್ಕಾರವು ಅಬಕಾರಿ ಮಾಫಿಯಾ, ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಹಾಗೂ ಲಲಿತ್ ಮೋದಿ ಪ್ರಮಾಣ ಪತ್ರ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪೈಲಟ್ ಆರೋಪಿಸಿದ್ದಾರೆ.
ವಸುಂಧರ ರಾಜೆ ಅವರ ಭ್ರಷ್ಟಾಚಾರ ಹಾಗೂ ದುರಾಳಿತದ ಕುರಿತು ಅಶೋಕ್ ಗೆಹ್ಲೋಟ್ ಟೀಕಿಸಿದ್ದ ಹಳೆಯ ವಿಡಿಯೊಗಳನ್ನು ಪ್ರದರ್ಶಿಸಿದ ಪೈಲಟ್, ಈ ವಿಷಯಗಳ ಕುರಿತು ಇನ್ನೂ ಯಾಕೆ ತನಿಖೆ ಅಥವಾ ವಿಚಾರಣೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರದ ಬಳಿ ಸಾಕ್ಷಿಗಳಿದ್ದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವು ಈ ಆಶ್ವಾಸನೆಗಳನ್ನು ಈಡೇರಿಸದೆ ಚುನಾವಣೆಗೆ ತೆರಳಲು ಸಾಧ್ಯವಿಲ್ಲ. ನಮ್ಮ ಬಳಿ ಸಾಕ್ಷ್ಯವಿದೆ. ನಾವು ಈಗಾಗಲೇ ಕ್ರಮ ಕೈಗೊಳ್ಳಬೇಕಿತ್ತು. ನಾವು ಈ ಕುರಿತು ತನಿಖೆ ಮಾಡಬೇಕಿದೆ. ನಾವು ಚುನಾವಣೆಗೆ ತೆರಳುತ್ತಿದ್ದೇವೆ. ಶೀಘ್ರವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ನಾವು ಜನರಿಗೆ ಉತ್ತರದಾಯಿಗಳಾಗಿದ್ದೇವೆ" ಎಂದು ಪೈಲಟ್ ಕಿಡಿ ಕಾರಿದ್ದಾರೆ .
"ಪಕ್ಷದ ನಾಯಕತ್ವಕ್ಕೆ ರಾಜಸ್ಥಾನದಲ್ಲಿನ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದ್ದೇನೆ ಮತ್ತು ಅವರಲ್ಲಿ ಒಬ್ಬರು ಈ ಕುರಿತು ಕ್ರಮ ಜರುಗಿಸಬೇಕಿದೆ. ಇದು ನಮ್ಮ ಸರ್ಕಾರವಾಗಿದ್ದು, ನಾವು ಕ್ರಮ ಕೈಗೊಳ್ಳಬೇಕಿದೆ. ಆಗ ಮಾತ್ರ ಜನರು ನಮ್ಮ ಬಗೆಗಿನ ವಿಶ್ವಾಸವನ್ನು ಮುಂದುವರಿಸುತ್ತಾರೆ" ಎಂದವರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿನ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪ ಚುನಾವಣೆಗಳಿಗೆ ಸಿದ್ಧತೆಯಲ್ಲಿ ತೊಡಗಿರುವಾಗಲೇ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರವನ್ನು ಸಚಿನ್ ಪೈಲಟ್ ಪ್ರಕಟಿಸಿದ್ದಾರೆ. ಸಚಿನ್ ಪೈಲಟ್‌ರ ಈ ನಡೆಯನ್ನು ಅಶೋಕ್ ಗೆಹ್ಲೋಟ್ ಮೇಲೆ ಒತ್ತಡ ಹೇರುವ ಹಾಗೂ ರಾಜ್ಯ ರಾಜಕಾರಣದಲ್ಲಿನ ತಮ್ಮ ಪ್ರಭಾವವನ್ನು ನಿರೂಪಿಸುವ ತಂತ್ರ ಎಂದು ವ್ಯಾಖ್ಯಾನಿಸಲಾಗುತ್ತಿದೆ.







