ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯಲ್ಲಿ ಗರಿಷ್ಠ ಪ್ರಮಾಣದ ಯೋಜನೆಗಳು ವಿಳಂಬ: ವರದಿ

ಹೊಸದಿಲ್ಲಿ: ರಸ್ತೆ ಸಾರಿಗೆ ಹಾಗೂ ಹೆದ್ದಾರಿ ವಲಯಗಳಲ್ಲಿ ಗರಿಷ್ಠ ಪ್ರಮಾಣದ ಯೋಜನೆಗಳು ವಿಳಂಬಗೊಂಡಿದ್ದು, ಈ ಯೋಜನೆಗಳ ಸಂಖ್ಯೆ 407 ಆಗಿದ್ದರೆ, ರೈಲ್ವೆ ವಲಯ ಹಾಗೂ ಪೆಟ್ರೋಲಿಯಂ ವಲಯದಲ್ಲಿ ಕ್ರಮವಾಗಿ 114 ಹಾಗೂ 86 ಯೋಜನೆಗಳು ವಿಳಂಬಗೊಂಡಿವೆ ಎಂಬ ಸಂಗತಿ ಸರ್ಕಾರಿ ವರದಿಯೊಂದರಲ್ಲಿ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ವಲಯದಲ್ಲಿನ 717 ಯೋಜನೆಗಳ ಪೈಕಿ 407 ಯೋಜನೆಗಳು ವಿಳಂಬಗೊಂಡಿವೆ. ರೈಲ್ವೆ ವಲಯದಲ್ಲಿ 173 ಯೋಜನೆಗಳ ಪೈಕಿ 114 ಯೋಜನೆಗಳು ವಿಳಂಬಗೊಂಡಿದ್ದರೆ, ಪೆಟ್ರೋಲಿಯಂ ವಲಯದಲ್ಲಿ 146 ಯೋಜನೆಗಳ ಪೈಕಿ 86 ಯೋಜನೆಗಳು ನಿಗದಿತ ಅವಧಿಗಿಂತ ವಿಳಂಬ ಗತಿಯಲ್ಲಿ ಪ್ರಗತಿಯಲ್ಲಿವೆ ಎಂದು ಫೆಬ್ರವರಿ 2023ರ ಮೂಲಸೌಕರ್ಯ ಯೋಜನೆಗಳ ಕುರಿತು ಬೆಳಕು ಚೆಲ್ಲುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು ಅಂತರ್ಜಾಲ ಗಣಕೀಕೃತ ಮೇಲುಸ್ತುವಾರಿ ವ್ಯವಸ್ಥೆ(OCMS)ಯ ಮೂಲಕ ರೂ. 150 ಕೋಟಿ ಹಾಗೂ ಅದಕ್ಕೂ ಹೆಚ್ಚಿನ ಮೊತ್ತದ ವೆಚ್ಚಗಳ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ಕುರಿತು ಒದಗಿಸುವ ಮಾಹಿತಿಗಳ ಮೇಲೆ ನಿಗಾ ಇಡುವುದನ್ನು ಮೂಲಸೌಕರ್ಯ ಹಾಗೂ ಯೋಜನಾ ಮೇಲುಸ್ತುವಾರಿ ವಿಭಾಗ(IPMD)ವು ಕಡ್ಡಾಯಗೊಳಿಸಿದೆ.
ಮೂಲಸೌಕರ್ಯ ಹಾಗೂ ಯೋಜನಾ ಮೇಲುಸ್ತುವಾರಿ ವಿಭಾಗವು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.
ವರದಿಯ ಪ್ರಕಾರ, ಮುನೀರಾಬಾದ್-ಮಹಬೂಬ್‌ನಗರ್ ನಡುವಿನ ರೈಲ್ವೆ ಯೋಜನೆಯು ಅತಿ ಹೆಚ್ಚು ವಿಳಂಬಗೊಂಡಿದ್ದು, ಈ ಯೋಜನೆಯು 276 ತಿಂಗಳುಗಳಷ್ಟು ವಿಳಂಬಗೊಂಡಿದೆ. ಎರಡನೆ ಅತಿ ಹೆಚ್ಚು ವಿಳಂಬಗೊಂಡಿರುವ ಯೋಜನೆಯು ಉಧಮ್‌ಪುರ್-ಶ್ರೀನಗರ್-ಬಾರಾಮುಲ್ಲಾ ನಡುವಿನ ರೈಲ್ವೆ ಯೋಜನೆಯಾಗಿದ್ದು, ಈ ಯೋಜನೆಯು 247 ತಿಂಗಳುಗಳಷ್ಟು ವಿಳಂಬಗೊಂಡಿದೆ.
ಮೂರನೆ ಅತಿ ಹೆಚ್ಚು ವಿಳಂಬಗೊಂಡಿರುವ ಯೋಜನೆಯು ಬೇಲಾಪುರ್-ಸೀವುಡ್ ಪಟ್ಟಣ ಮಾರ್ಗದ ವಿದ್ಯುದೀಕರಣ ಜೋಡಿ ಹಳಿ ಯೋಜನೆಯಾಗಿದ್ದು, ನಿಗದಿತ ಅವಧಿಗಿಂತ 228 ತಿಂಗಳು ವಿಳಂಬಗೊಂಡಿದೆ.
ಫೆಬ್ರವರಿ 2023ನೇ ಸಾಲಿನ ಮೇಲೆ ಬೆಳಕು ಚೆಲ್ಲುವ ಈ ವರದಿಯು, ರೂ. 150 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಒಟ್ಟು 1,418 ಕೇಂದ್ರ ವಲಯ ಮೂಲಸೌಕರ್ಯ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಹೊಂದಿದೆ.







