ಅಮುಲ್ ರಾಜ್ಯದಲ್ಲಿ ಮಾರಾಟವಾದರೆ ತಡೆಗಟ್ಟಲು ಸಾಧ್ಯವಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಅಮುಲ್ ಸೇರಿದಂತೆ ಯಾವುದೇ ಬ್ರ್ಯಾಂಡ್ ಬಂದರೂ ನಮ್ಮ ರೈತರಿಗೆ ಯಾವುದೇ ತೊಂದರೆ ಆಗಲ್ಲ. ಅಮುಲ್ ಸೇರಿದಂತೆ ಯಾವುದೇ ಬ್ರಾಂಡುಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಮಾರಾಟವಾದರೂ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಎಂಎಫ್ ನಂದಿನಿಗೆ ಸರಿಗಟ್ಟುವ ಇನ್ನೊಂದು ಮಾರುಕಟ್ಟೆ ಇಲ್ಲ. ನಾವು 74 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದೇವೆ. ಒಂದು ಕೋಟಿ ಲೀಟರ್ ಗೆ ನಮ್ಮಲ್ಲಿ ಬೇಡಿಕೆ ಇದೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೇರೆ ರಾಜ್ಯದ ಉತ್ಪನ್ನ ಬರಬಹುದು. ಯಾವುದೇ ಹಾಲು ಬಂದರು ನಮ್ಮ ಜೊತೆ ಸ್ಪರ್ಧೆ ಮಾಡಬಹುದೇ ಹೊರತು ನಂದಿನಿ ಬ್ರಾಂಡ್ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದರು.
ನಮ್ಮ ರಾಜ್ಯದಲ್ಲಿ ವಿವಿಧ ಎಂಟು ರಾಜ್ಯಗಳ ವಿವಿಧ ಬ್ರಾಂಡ್‌ಗಳ ಹಾಲುಗಳು ಮಾರಾಟವಾಗುತ್ತಿವೆ. ಆದರೆ ನಮ್ಮ ನಂದಿನಿ ಬ್ರಾಂಡಿಗೆ ಏನು ತೊಂದರೆ ಆಗಿಲ್ಲ. ಕಾಶ್ಮೀರದವರೆಗೆ ಮಾತ್ರವಲ್ಲ ವಿದೇಶದಲ್ಲೂ ನಂದಿನಿಗೆ ಉತ್ತಮ ಮಾರುಕಟ್ಟೆ ಇದೆ. ಅಮುಲ್ ಗುಜರಾತಿನಿಂದ ಬಂದಿದೆ ಎಂಬ ರಾಜಕೀಯ ಕಾರಣಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ. ಈ ವಿಚಾರವನ್ನು ರೈತರು ಮತ್ತು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗುಜರಾತ್ ಎಂದ ಕೂಡಲೇ ಕೆಲವರಿಗೆ ಆತಂಕ ಶುರುವಾಗುತ್ತದೆ. ಗುಜರಾತ್ ಮಾದರಿ ಅಂದರೆ ಸಂಕಟ ಪಡುತ್ತಾರೆ. ಇಡೀ ದೇಶದಲ್ಲಿ ಗುಜರಾತ್ ಒಂದು ಮಾದರಿ ರಾಜ್ಯವಾಗಿದೆ. ಗುಜರಾತ್ ನಮ್ಮದೇ ದೇಶದ ಒಂದು ಭಾಗ. ಆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಡಿಕೆಶಿ, ಸಿದ್ದರಾಮಯ್ಯ ಹೇಳುತ್ತಾರೆ. ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿಯ ಹೆಚ್ಚಳವನ್ನು ನೀವೇನಾದರೂ ರದ್ದುಪಡಿಸುತ್ತೀರಾ? ಪರಿಶಿಷ್ಟ ಜಾತಿಗೆ ಇದ್ದ ಶೇ.15 ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಿದ್ದೇವೆ. ಮೂರು ಶೇಕಡ ಇದ್ದ ಎಸ್‌ಟಿ ಮೀಸಲಾತಿಯನ್ನು ಏಳಕ್ಕೆ ಏರಿಸಿದ್ದೇವೆ. ಅದನ್ನು ರದ್ದು ಮಾಡುತ್ತೀರಾ? ಎಂದು ಅವರು ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಮೀಸಲಾತಿಯನ್ನು ಮರು ಹಂಚಿಕೆ ಮಾಡಿ ಆರ್ಥಿಕವಾಗಿ ಬಡವರಿಗೆ ನೀಡಿದ್ದೇವೆ. ಅತ್ಯಂತ ವೈಜ್ಞಾನಿಕವಾಗಿ ಸರ್ವರಿಗೆ ಸಮ ಬಾಳು ನೀಡುವ ಮೀಸಲಾತಿ ಜಾರಿಗೆ ತಂದಿದ್ದೇವೆ. ಸದಾಶಿವ ಆಯೋಗದ ವರದಿಯನ್ನು ಗಮನದಲ್ಲಿ ಇಟ್ಟುಕೊಂಡು ಒಳ ಮೀಸಲಾತಿಯನ್ನು ಮಾಡಿದ್ದೇವೆ. ಇಲ್ಲಿಯವರೆಗೆ ವಂಚನೆಗೊಳ ಗಾದ ಜನರಿಗೆ ನ್ಯಾಯ ಕೊಡುತ್ತೇವೆ ಎಂದರು.
ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕಾರಣ ಇತಿಹಾಸದಲ್ಲಿಯೇ ಮಾದರಿ ಘೋಷಣೆ ಮಾಡಿದ್ದಾರೆ. ಸ್ಪರ್ಧಾ ರಾಜಕಾರಣದಿಂದ ಹಿಂದೆ ಸರಿದರೂ ಸಕ್ರಿಯ ರಾಜಕಾರಣದಲ್ಲಿ ಹಾಲಾಡಿ ಮುಂದುವರೆಯುತ್ತಾರೆ. ರಾಜ್ಯದ ರಾಜಕಾರಣ ದಲ್ಲಿ ಇವರ ನಿರ್ಧಾರ ತಲ್ಲಣ ಮೂಡಿಸಿದೆ. ಎಲ್ಲಾ ಪಕ್ಷದವರು ಅವರ ನಡವಳಿಕೆಯನ್ನು ಗೌರವಿಸಿದ್ದಾರೆ. ಹಾಲಾಡಿ ಹಿಂದೆ ಸರಿದ ಹಿನ್ನೆಲೆಯಲ್ಲಿ ಕುಂದಾಪುರವು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು. ಕುಂದಾಪುರ ಕ್ಷೇತ್ರದಲ್ಲಿ ಹೊಸ ಮುಖ ಬರಬೇಕಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರ ಬಿಜೆಪಿ ಗೆಲ್ಲುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ಟಿಕೆಟ್ ಘೋಷಣೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ, ಒಂದೊಂದು ಕ್ಷೇತ್ರದಲ್ಲೂ ಐದಾರು ಆಕಾಂಕ್ಷಿಗಳಿದ್ದಾರೆ. ನಮಗೆ ಅವಕಾಶ ಕೊಡಿ ಗೆಲ್ಲುತ್ತೇವೆ ಎಂಬ ವಾತಾವರಣ ನಿರ್ಮಿಸಿದ್ದಾರೆ. ಅವಕಾಶ ಕೇಳಿದವರೆಲ್ಲ ನಮ್ಮದೇ ಕಾರ್ಯಕರ್ತರು. ಪಕ್ಷಕ್ಕೋಸ್ಕರ ದುಡಿದವರು ಖರ್ಚು ಮಾಡಿದವರು, ಸಮಯ ಕೊಟ್ಟವರು ಇದ್ದಾರೆ. ಸ್ಪರ್ಧಾಕಾಂಕ್ಷಿಗಳು ಹೆಚ್ಚಿರುವ ರಾಜಕೀಯ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಳಂಬವಾಗುವುದು ಸಹಜ ಎಂದು ಅವರು ಹೇಳಿದರು.
‘ಕರಾವಳಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಆಯ್ಕೆ ಕಾರ್ಯಕರ್ತರ ಭಾವನೆ ಗಮನದಲ್ಲಿ ಇಟ್ಟುಕೊಂಡು ಆಗುತ್ತದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಅಧ್ಯಕ್ಷ ನಡ್ದ ಅವರ ತಂಡ ಅಂತಿಮ ತೀರ್ಮಾನ ಇಂದು ಅಥವಾ ನಾಳೆ ಪ್ರಕಟಿಸುತ್ತದೆ. ಕರಾವಳಿಯಲ್ಲಿ ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮಲ್ಲಿ ಯಾವ ಗೊಂದಲವು ಇಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಮೇಲೆ, ಸಮೀಕ್ಷೆಯ ಮೇಲೆ ಗೆಲ್ಲುವ ಅಭ್ಯರ್ಥಿಗೆ ಅವಕಾಶ ಸಿಗುತ್ತದೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಒಳ್ಳೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ’
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು.