ಕಾರ್ಕಳ: ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಕಾರ್ಕಳ: ಹಿಂದುತ್ವ, ಅಭಿವೃದ್ಧಿ, ಯುವ ನಾಯಕತ್ವದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ, ಕಾರ್ಕಳವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸುವುದೇ ಸ್ವರ್ಣ ಕಾರ್ಕಳದ ಪರಿಕಲ್ಪನೆಯಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಹಾಕಿಕೊಂಡ ಯೋಜನೆಗಳನ್ನು ಹಂತಹಂತವಾಗಿ ಸಾಧಿಸಿದ ತೃಪ್ತಿ ನಮಗಿದೆ. ಕಾರ್ಕಳದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಐಟಿಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ನರ್ಸಿಂಗ್ ಕಾಲೇಜು, ಜರ್ಮನ್ ಟೆಕ್ನಾಲಜಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡಲಾಗಿದೆ. ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ 236 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಹರಿಯಪ್ಪನ ಕೆರೆ, ಮಠದಕೆರೆ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಗಳ ನಿರ್ಮಾಣ, ಕ್ಷೇತ್ರದ ಜನರು ವಿದ್ಯುತ್ ಸಂಬಂಧಿತ ಕೆಲಸಗಳಿಗೆ ಉಡುಪಿಗೆ ಅಲೆದಾಡುವುದನ್ನು ತಪ್ಪಿಸಲು ಕಾರ್ಕಳದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ಆರಂಭಿಸಲಾಗಿದೆ. ಅಭಿವೃದ್ಧಿಯ ಜತೆಗೆ ಹಿಂದುತ್ವಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಮತಾಂತರ ನಿಷೇಧ, ಹಿಜಾಬ್ ನಿಷೇಧ, ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಹಿಂದುತ್ವದ ಪರವಾಗಿದೆ ಎಂದು ಸಾಬೀತಾಗಿದೆ. ವಿಧಾನಸಭೆ ಚುನಾವಣೆ ಸ್ಥಳೀಯ ಭಿನ್ನಮತದ ಸಮಸ್ಯೆ ಪರಿಹಾರಕ್ಕೆ ಅಲ್ಲ, ನರೇಂದ್ರ ಮೋದಿಯವರ ಕೈ ಬಲಪಡಿಸುವ ಮೂಲಕ ದೇಶದ ಭದ್ರತೆ, ಅಭಿವೃದ್ಧಿಗಾಗಿ ನಡೆಯುವ ಚುನಾವಣೆ ಇದಾಗಿದೆ. ಕಾರ್ಕಳದ ಚುನಾವಣೆ ಅಭಿವೃದ್ಧಿಪರ ಹಾಗೂ ಅಭಿವೃದ್ಧಿ ವಿರೋಧಿಗಳ ನಡುವಿನ ಚುನಾವಣೆಯಾಗಿದೆ ಎಂದರು.
ಅಭಿವೃದ್ಧಿಯನ್ನು ಸಹಿಸದ ಮಾನಸಿಕ ಭ್ರಷ್ಟಾಚಾರಿಗಳ, ಹೊಟ್ಟೆಕಿಚ್ಚಿನ, ಜಾತಿ ವ್ಯಾಮೋಹದ ಭ್ರಷ್ಟಾಚಾರಿಗಳಿಂದ ಮತದಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. ಕಾರ್ಯಕರ್ತರ ಸಹಕಾರದಿಂದ ಕಳೆದ 2 ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಅಭಿವೃದ್ಧಿ ಎನ್ನುವುದು ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಜಾತಿ ರಾಜಕಾರಣ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಯಲು ಸಾಧ್ಯವಿಲ್ಲ. ಸಮಾಜದ ಎಲ್ಲಾ ವರ್ಗದ ಜನರ ಹಿತಕಾಯುವುದು ನಮ್ಮ ಗುರಿಯಾಗಿದೆ ಎಂದರು.
ಸುನೀಲ್ ಕುಮಾರ್ ಹಿಂದುತ್ವದ ಹೆಸರಿನಲ್ಲಿ ಚುನಾವಣೆ ಗೆದ್ದು ಹಿಂದುತ್ವವನ್ನು ಮರೆತಿದ್ದಾರೆ ಎಂಬ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ನ್ಯಾಯವಾದಿ, ಬಿಜೆಪಿ ಮುಖಂಡ ಎಂ ಕೆ ವಿಜಯಕುಮಾರ್ ಮಾತನಾಡಿ, ತುಳುನಾಡಿನ ಆರಾಧ್ಯ ಧೈವ ಕೋಟಿಚೆನ್ನಯ ಪಾರ್ಕ್ ನಿರ್ಮಾಣ, ತುಳುನಾಡಿನ ಸ್ರಷ್ಟಿಕರ್ತ ಪರಶುರಾಮ ಪ್ರತಿಮೆ ನಿರ್ಮಾಣ, ಕಾರ್ಕಳದ ಮಾರಿಗುಡಿ ಪುನರ್ ನಿರ್ಮಾಣ ಕಾರ್ಯ ಏನು ಹಿಂದುತ್ವದ ಪ್ರತೀಕವಲ್ಲವೇ ಎಂದ ಅವರು ಕೇಂದ್ರದ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಈ ಬಾರಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ್ ನೀಡಲು ಹೊರಟಿದೆ ಮಾತ್ರವಲ್ಲದೆ ಮಹಿಳೆಯರಿಗೆ 2000 ರೂಪಾಯಿ ನೀಡುವ ಆಶ್ವಾಸನೆ ಕುಡುಕ ಗಂಡ ತನ್ನ ಪತ್ನಿಗೆ ಹೊಸ ಸೀರೆ ತರುತ್ತೇನೆ ಎಂದು ಹೇಳಿ ಆತ ರಾತ್ರಿ ಮನೆಗೆ ಬರುವಾಗ ತನ್ನ ಸೀರೆಗಳನ್ನು ಹೊತ್ತಿಸಿ ಬರೀ ಲಂಗದಲ್ಲಿ ಕಾದು ಕುಳಿತುಕೊಂಡಳು. ಅವಳಿಗೆ ಲಂಗ ಆದ್ರೂ ಇತ್ತು ನೀವು ಕಾಂಗ್ರೆಸ್ ನ ಹಣಕ್ಕಾಗಿ ಕಾದರೆ ನಿಮಗೆ ಲಂಗನೂ ಇರುವುದಿಲ್ಲ ಎಂದು ಲೇವಡಿ ಮಾಡಿದರು.
ಕಾರ್ಕಳಕ್ಕೆ ಸುಪಾರಿ ಪಡಕೊಂಡು ಬಂದ ಛದ್ಮವೇಷ ಪಾತ್ರದಾರಿ ಹಿಂದುತ್ವದ ಬಗ್ಗೆ ಮಾತನಾಡುವವರು ಬಿಜೆಪಿ ನಾಯಕರ ಎದುರು ಚುನಾವಣೆ ಸ್ಪರ್ಧಿಸಿ ಬೆರಳೆಣಿಕೆಯಷ್ಟು ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡು ಓಡಿದವರು ಈಗ ಇಲ್ಲಿಗೆ ಬಂದಿದ್ದಾರೆ ಅವರನ್ನು ಕಳಿಸಿದ ನಮ್ಮವರನ್ನು ಎನು ಮಾಡಬೇಕು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ನಿಮ್ಮಲ್ಲಿ ಅಪಪ್ರಚಾರ ಮತ್ತು ಜಾತಿ ಹೆಸರು ಹೇಳಿ ಸುಳ್ಳಿನ ಕಂತೆಯೊಂದಿಗೆ ಬರಬಹುದು ಆದರೆ ಜಾತಿ ಯಾವುದು ಸ್ವಾಮಿ ನಮ್ಮಲ್ಲಿ ನೆಂಟಸ್ಥಿಕೆ, ಸಮಾರಂಭದ ಆಹ್ವಾನ, ಮನೆಯಲ್ಲಿ ಊಟಕ್ಕೆ ಕರೆಯುವಾಗ ಮಾತ್ರ ಜಾತಿ ಅಭಿವೃದ್ಧಿಯಲ್ಲಿ ಯಾವುದೇ ಜಾತಿ ಇಲ್ಲ ನಮ್ಮದು ಕೇವಲ ಅಭಿವೃದ್ಧಿ ಮಾತ್ರ ಇದರ ಮೂಲಕ ನಾವು ಸುನೀಲ್ ಕುಮಾರ್ ರವರನ್ನು ಪ್ರಚಂಡ ಬಹುಮತದಿಂದ ಆರಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಕಾರ್ಕಳ ಉಸ್ತುವಾರಿಯಾದ ಬಾಹುಬಲಿ ಪ್ರಸಾದ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್, ಮಹೇಶ್ ಶೆಟ್ಟಿ ಕುಡುಪುಲಾಜೆ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಕಿಣಿ ವಂದೇಮಾತರಂ ಹಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಜೈನ್ ಸ್ವಾಗತಿಸಿ ಪ್ರಸ್ತಾವವನೆಗೈದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ರಾವ್ ವಂದಿಸಿದರು.








.jpeg)

.jpeg)


.jpeg)

