ಅವರ ನಂಬಿಕೆ ಅಯೋಧ್ಯೆ ಮೇಲೆ, ನಮ್ಮದು ರೈತರ ಮೇಲೆ: ಮಹಾರಾಷ್ಟ್ರ ಸಿಎಂ ಅಯೋಧ್ಯೆ ಭೇಟಿಗೆ ಬಗ್ಗೆ ಶರದ್ ಪವಾರ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಭಕ್ತರ ಕನಸಿನ ರಾಮಮಂದಿರವನ್ನು ಅಯೋಧ್ಯೆಯಲ್ಲಿ ಸಾಕಾರಗೊಳಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶ್ಲಾಘಿಸಿದ್ದು, ಇದಕ್ಕೆ ಪ್ರತಿಯಾಗಿ "ರಾಜ್ಯ ಸರ್ಕಾರವು ಅಯೋಧ್ಯೆಯ ಮೇಲೆ ನಂಬಿಕೆ ಇರಿಸಿದ್ದರೆ, ನಾವು ರೈತರ ಮೇಲೆ ನಂಬಿಕೆ ಇರಿಸಿದ್ದೇವೆ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿರುಗೇಟು ನೀಡಿದ್ದಾರೆ.
ರವಿವಾರ ನಾಸಿಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅಯೋಧ್ಯೆಗೆ ಭೇಟಿ ನೀಡಿರುವುದು ಅವರ ನಂಬಿಕೆಗೆ ಸಂಬಂಧಿಸಿದ ವಿಷಯ. ಆದರೆ, ನಮ್ಮ ನಂಬಿಕೆ ರೈತರ ಮೇಲಿದೆ. ಇದು ನಷ್ಟ ಅನುಭವಿಸಿರುವ ರೈತರಿಗೆ ಸಂಬಂಧಿಸಿದ ಸಂಗತಿಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವುದರಲ್ಲಿ ನಮಗೆ ನಂಬಿಕೆಯಿದೆ. ನಮ್ಮ ನಂಬಿಕೆ ಅವರ ಕಣ್ಣೀರನ್ನು ಒರೆಸಿ, ಅವರಿಗೆ ನೆರವು ವಿಸ್ತರಿಸುವುದರಲ್ಲಿದೆ" ಎಂದು ಹೇಳಿದ್ದಾರೆ.
ಅನಿರೀಕ್ಷಿತ ಮಳೆ ಹಾಗೂ ಆಲಿಕಲ್ಲು ಮಳೆಯಿಂದ ರೈತರು ಸಂಕಷ್ಟದಲ್ಲಿರುವ ಬಗ್ಗೆ ಬೊಟ್ಟು ಮಾಡಿರುವ ಪವಾರ್, "ಸರ್ಕಾರವೇನಾದರೂ ಈ ಸಮಸ್ಯೆಯ ಕಡೆ ಗಮನ ಹರಿಸಿ, ಶೀಘ್ರ ಕ್ರಮ ಕೈಗೊಂಡರೆ ಒಳಿತಾಗಲಿದೆ" ಎಂದಿದ್ದಾರೆ.
"ಆಡಳಿತಾರೂಢ ಪಕ್ಷಗಳು ಅಯೋಧ್ಯೆ ಭೇಟಿಯನ್ನು ಸಾರ್ವಜನಿಕಗೊಳಿಸಲು ಆದ್ಯತೆ ನೀಡುವ ಮೂಲಕ ನೈಜ ಹಾಗೂ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ ಹಾಗೂ ರೈತರ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿವೆ" ಎಂದೂ ಅವರು ಟೀಕಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದ್ದು, ಕಾಂಗ್ರೆಸ್ ವಿಜಯಿಯಾಗಲಿದೆ ಎಂದೂ ಭವಿಷ್ಯ ನುಡಿದಿರುವ ಶರದ್ ಪವಾರ್, "ನಾಯಕರೊಂದಿಗಿನ ಮಾತುಕತೆಗಳನ್ನು ಆಧರಿಸಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡು, ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ನನಗನ್ನಿಸುತ್ತಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೌತಮ್ ಅದಾನಿ ಕಠಿಣ ಪರಿಶ್ರಮಿ, ವಿಧೇಯ: ಜೀವನ ಚರಿತ್ರೆಯಲ್ಲಿ ಶರದ್ ಪವಾರ್







