ಮಕ್ಕಳಿಗೆ ಭಾರತದ ಪೌರತ್ವ ಕಲ್ಪಿಸಲು ಕೋರಿ ಅರ್ಜಿ: ಕೇಂದ್ರಕ್ಕೆ ನಿರ್ದೇಶಿಸಲು ಹೈಕೋರ್ಟ್ ನಕಾರ

ಬೆಂಗಳೂರು, ಎ.9: ಭಾರತೀಯ ಪಾಸ್ ಪೋರ್ಟ್ ಮತ್ತು ಪೌರತ್ವ ಕಲ್ಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆ ದುಬೈನಲ್ಲಿ ಜನಿಸಿದ ಮಕ್ಕಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.
ತಮ್ಮ ಇಬ್ಬರು ಮಕ್ಕಳಿಗೆ ಭಾರತೀಯ ಪೌರತ್ವ ಮತ್ತು ಪಾಸ್ ಪೋರ್ಟ್ ನೀಡಲು ಕೋರಿ ಕಳೆದ ವರ್ಷಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿದಾರ ಮಕ್ಕಳ ತಾಯಿ ಅಮೀನಾ ರಹೀಲ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್, ಮಾನ್ಯ ಮಾಡಲು ನಿರಾಕರಿಸಿದೆ.
ಅಪ್ರಾಪ್ತರಿಗೆ ಪೌರತ್ವ ನೀಡಲು ಕಾಯಿದೆಯ ಸೆಕ್ಷನ್ 5(1)(ಡಿ) ಅಡಿ ಮಕ್ಕಳ ತಂದೆ-ತಾಯಿ ಇಬ್ಬರೂ ಭಾರತೀಯ ಪ್ರಜೆಗಳಾಗಿರಬೇಕು. ಪೌರತ್ವ ಕಲ್ಪಿಸಲು ಅಗತ್ಯವಾದ ಎಲ್ಲ ದಾಖಲೆಗಳನ್ನು ಸಂಬಂಧಿತ ಪ್ರಾಧಿಕಾರದ ಮುಂದೆ ಇಡಬೇಕು. ಅಪ್ರಾಪ್ತರಿಗೆ ಪೌರತ್ವ ತ್ಯಜಿಸಲು ಪಾಕಿಸ್ತಾನದ ಕಾನೂನು ಅನುಮತಿ ನೀಡದಿದ್ದಾಗ ಅಂಥವರಿಗೆ ಪೌರತ್ವ ಕಲ್ಪಿಸಲು ಈ ದೇಶದ ಕಾನೂನು ಸಮ್ಮತಿಸುವುದಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
ಅಲ್ಲದೆ, ಅರ್ಜಿದಾರ ಮಕ್ಕಳ ತಾಯಿಯು ಕಾನೂನಿನ ಅಡಿ ಪೌರತ್ವ ಪಡೆಯಲು ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು. ಮಕ್ಕಳು ಪಾಕಿಸ್ತಾನದ ಪಾಸ್ ಪೋರ್ಟ್ ನೀಡಿದ್ದು, ಪೌರತ್ವ ತ್ಯಜಿಸಿಲ್ಲ. ಹೀಗಾಗಿ, ಅವರು ಇಂದಿಗೂ ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ಪಾಕ್ ಪೌರತ್ವ ತ್ಯಜಿಸದ ಹೊರತು ಮಕ್ಕಳಿಗೆ ಪೌರತ್ವ ಕಲ್ಪಿಸುವಂತೆ ಕೋರಿರುವ ತಾಯಿಯ ಮನವಿ ಪರಿಗಣಿಸುವಂತೆ ವಿದೇಶಾಂಗ ಇಲಾಖೆಗೆ ನಿರ್ದೇಶಿಸಲಾಗದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಬೆಂಗಳೂರಿನ ಅಮೀನಾ ರಹೀಲ್ ಮತ್ತು ಪಾಕಿಸ್ತಾನದ ಅಸ್ಸಾದ್ ಮಲಿಕ್ 2002ರ ಎಪ್ರಿಲ್‍ನಲ್ಲಿ ದುಬೈನಲ್ಲಿ ವಿವಾಹವಾಗಿದ್ದರು. ದಂಪತಿಗೆ 2004ರಲ್ಲಿ ಆಯಿಷಾ ಮಲಿಕ್ (17 ವರ್ಷ) ಮತ್ತು 2008ರಲ್ಲಿ ಅಹ್ಮದ್ ಮಲಿಕ್ (14 ವರ್ಷ) ಜನಿಸಿದ್ದರು.







