ದ್ವೇಷ ಭಾಷಣ ಪ್ರಕರಣ: ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿಯನ್ನು ಬಂಧಿಸಿದ ಪೊಲೀಸರು
ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪ

ಅಹಮದಾಬಾದ್: ಎಪ್ರಿಲ್ 1ರಂದು ರಾಮನವಮಿಯ ಸಂದರ್ಭದಲ್ಲಿ ಊನಾ ಪಟ್ಟಣದಲ್ಲಿ ನಡೆದ ಕೋಮುಗಲಭೆಗೆ ದ್ವೇಷ ಭಾಷಣದ ಮೂಲಕ ಪ್ರಚೋದನೆ ನೀಡಿದ ಆರೋಪದಲ್ಲಿ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿಯನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ರವಿವಾರ ಕಾಜಲ್ ಹಿಂದೂಸ್ತಾನಿ ಊನಾದಲ್ಲಿ ಪೊಲೀಸರೆದುರು ಶರಣಾಗಿದ್ದು, ನಂತರ ಅವರನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರು ಪಡಿಸಲಾಯಿತು. ನಂತರ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ವಿಟರ್‌ನ ವೈಯಕ್ತಿಕ ವಿವರದಲ್ಲಿ ತನ್ನನ್ನು ಉದ್ಯಮಿ, ಸಂಶೋಧನಾ ವಿಶ್ಲೇಷಕಿ, ಸಾಮಾಜಿಕ ಕಾರ್ಯಕರ್ತೆ, ರಾಷ್ಟ್ರೀಯವಾದಿ ಹಾಗೂ ಹೆಮ್ಮೆಯ ಭಾರತೀಯಳು ಎಂದು ಗುರುತಿಸಿಕೊಂಡಿರುವ ಕಾಜಲ್ ಹಿಂದೂಸ್ತಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 92,000 ಹಿಂಬಾಲಕರನ್ನು ಹೊಂದಿದ್ದಾಳೆ. ಆಕೆ ವಿಶ್ವ ಹಿಂದೂ ಪರಿಷತ್‌ನಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳ ಆಯೋಜಕಿಯಾಗಿದ್ದಾಳೆ.
ಮಾರ್ಚ್ 20ರಂದು ರಾಮನವಮಿಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಹಿಂದೂ ಸಮುದಾಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಎರಡು ದಿನಗಳ ನಂತರ ಕಾಜಲ್ ಹಿಂದೂಸ್ತಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕ ಹಾಗೂ ಅಪಮಾನಕಾರಿ ಕ್ರಿಯೆಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸಿ ಧಕ್ಕೆ ಉಂಟು ಮಾಡುವುದು) ಅಡಿ ಎಪ್ರಿಲ್ 2ರಂದು ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.
ಕಾಜಲ್ ಹಿಂದೂಸ್ತಾನಿ ಭಾಷಣದಿಂದ ಎಪ್ರಿಲ್ 1ರ ರಾತ್ರಿ ಎರಡು ಕೋಮುಗಳ ನಡುವೆ ಘರ್ಷಣೆಯುಂಟಾಗಿ, ಕಲ್ಲು ತೂರಾಟ ನಡೆದಿದ್ದರಿಂದ ಊನಾ ಪಟ್ಟಣದಲ್ಲಿ ಎರಡು ದಿನಗಳ ಕಾಲ ಕೋಮು ಉದ್ವಿಗ್ನತೆ ಸೃಷ್ಟಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪೊಂದರ ವಿರುದ್ಧವೂ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿರುವ ಪೊಲೀಸರು, ಗಲಭೆ ಸೃಷ್ಟಿಸಿದ ಆರೋಪದಲ್ಲಿ 80ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿದೆ ಎಂದು indianexpress.com ವರದಿ ಮಾಡಿದೆ.







