ಜನ ಬೀದಿಗೆ ಬಂದಾಗ ಬರದ ಮೋದಿ ಈಗ ಸೂಟು-ಬೂಟು ಧರಿಸಿ ಸಫಾರಿ ಮಾಡಲು ಬಂದಿದ್ದಾರೆ: ಎಚ್‍ಡಿಕೆ ಟೀಕೆ
ಬೆಂಗಳೂರು, ಎ.9: ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಆದರೆ, ಇವತ್ತು ಸಫಾರಿ ಮಾಡಲು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿಗಳಿಂದ ಎಷ್ಟು ದಾಳಿ ಆಗಿದೆ, ಎಷ್ಟು ಜೀವ ಹಾನಿ, ದಾಳಿಗೆ ಒಳಗಾದ ಯಾವುದಾದರೂ ಒಂದು ಕುಟುಂಬವನ್ನು ಭೇಟಿ ಮಾಡಿದ್ದಾರಾ?, ವನ್ಯಜೀವಿ ದಾಳಿಗೆ ಒಳಗಾದ ಕುಟುಂಬದ ಪರಿಸ್ಥಿತಿ ಏನಾಗಿದೆ? ಎನ್ನುವುದನ್ನು ಇದುವರೆಗೂ ವಿಚಾರ ಮಾಡಿಲ್ಲ. ಆದರೆ, ಈಗ ಏಕಾಏಕಿ ಸೂಟು-ಬೂಟು ಧರಿಸಿ ಬಂದರೆ ಆಗುತ್ತಾ ಎಂದು ವಾಗ್ದಾಳಿ ನಡೆಸಿದರು.
ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಎಂದು ವರದಿಯಾಗಿದೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ನಾಡಿನ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ವನ್ಯಜೀವಿಗಳನ್ನು ನೋಡಲು ಬಂದ ತಕ್ಷಣ ಇವರಿಗೆ ಮತದಾರರು ಮತ ನೀಡುತ್ತಾರಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
Next Story