ಎ.11ರಂದು ಮತದಾರರ ಪಟ್ಟಿಗೆ ಸೇರಲು ಕೊನೆಯ ದಿನ

ಮಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮತ ಚಲಾಯಿ ಸಲು 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಲು ಎಪ್ರಿಲ್ 11 ಕೊನೆಯ ಅವಕಾಶವಾಗಿದೆ ಎಂದು ಚುನಾವಣಾಧಿಕಾರಿಯ ಪ್ರಕಟಣೆ ತಿಳಿಸಿದೆ.
ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46,967 ಮಂದಿ ಹಿರಿಯ ನಾಗರಿಕರು ಹಾಗೂ 14,007 ಮಂದಿ ವಿಶೇಷ ಚೇತನ ಮತದಾರರಿದ್ದಾರೆ.
ನೋಂದಣಿ ವಿಧಾನ
ವೆಬ್ ಸೈಟ್ https://ceo.Karnataka.gov.in/en ಅಥವಾ app ಮೂಲಕ ಹಾಗೂ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕವೂ ನೊಂದಾಯಿಸಿಕೊಳ್ಳಬಹುದು. ಅಲ್ಲದೆ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ (ಆಫ್ಲೈನ್) ನೇರವಾಗಿ ಕೂಡ ನೋಂದಣಿ ಮಾಡಬಹುದು. ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ನ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಿ ಅಗತ್ಯ ಮಾಹಿತಿ ನೀಡಿ ಹೆಸರು ಸೇರಿಸಿಕೊಳ್ಳಬಹುದು.
ನೋಂದಣಿಗೆ ಬೇಕಾದ ಅಗತ್ಯ ದಾಖಲೆಗಳು
ಮತದಾರರ ಹೆಸರು ಸೇರ್ಪಡೆಗೊಳಿಸಲು ಜನನ ದಾಖಲೆಯಾಗಿ ಭಾವ ಚಿತ್ರದ ಜೊತೆ ಜನನ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಶಾಲಾ-ಕಾಲೇಜಿನಲ್ಲಿ ನೀಡಿರುವ ಜನ್ಮ ದಿನಾಂಕವನ್ನು ಹೊಂದಿರುವ ಪ್ರಮಾಣ ಪತ್ರದಲ್ಲಿ ಯಾವುದಾದರೂ ಒಂದು ದಾಖಲೆ ಮತ್ತು ವಿಳಾಸದ ದೃಢೀಕರಣ ದಾಖಲೆಗಾಗಿ ಅಂಚೆ ಕಚೇರಿ ಪಾಸ್ ಪುಸ್ತಕ ಅಥವಾ ವಿದ್ಯುತ್, ನೀರು, ಗ್ಯಾಸ್ ಬಿಲ್ಲಿನ ಪ್ರತಿಗಳನ್ನು (ಕನಿಷ್ಠ ಒಂದು ವರ್ಷದ ಪ್ರತಿ)ಯಾವುದಾದರೂ ಕನಿಷ್ಠ ಒಂದು ದಾಖಲೆಯನ್ನು ಹಾಜರು ಪಡಿಸಬಹುದು.
ಹೀಗೆ ಜನನ ಮತ್ತು ವಾಸ ಸ್ಥಳದ ವಿಳಾಸದ ಎರಡು ದಾಖಲೆಗಳನ್ನು ಜೊತೆಗೆ ಕಲರ್ ಫೋಟೊ ಪ್ರತಿಯನ್ನು ನೋಂದಣಿ ಸಂದರ್ಭದಲ್ಲಿ ಒದಗಿಸಬೇಕು ಎಂದು ಪ್ರಕಟಣೆ ತಿಳಿಸಿದೆ.







