ಕರಾವಳಿಯಲ್ಲಿ ಸಂಭ್ರಮದ ಈಸ್ಟರ್ ಆಚರಣೆ

ಮಂಗಳೂರು: ಕರಾವಳಿಯಲ್ಲಿ ಕ್ರೈಸ್ತರು ರವಿವಾರ ಯೇಸುವಿನ ಪುನರುತ್ಥಾನದ ಫಾಸ್ಕಾ ಹಬ್ಬ(ಈಸ್ಟರ್)ವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
40 ದಿನಗಳ ಕಾಲ ಧ್ಯಾನ, ಪ್ರಾರ್ಥನೆಯ ಜತೆಗೆ ಯೇಸುವಿನ ತ್ಯಾಗ, ಬಲಿದಾನದ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಫಾಸ್ಕಾ ಜಾಗರಣೆ ಬಳಿಕ ರವಿವಾರ ಈಸ್ಟರ್ ಹಬ್ಬದ ಮೂಲಕ ಯೇಸುವಿನ ಪುನರುತ್ಥಾನದ ವಿಶ್ವಾಸವನ್ನು ತಮ್ಮ ಬದುಕಿನಲ್ಲಿ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಈಸ್ಟರ್‌ನ ಬಲಿಪೂಜೆಗಳು ನಡೆಯಿತು. ಮಂಗಳೂರು ನಗರದ ರೊಸಾರಿಯೋ, ಮಿಲಾಗ್ರಿಸ್, ಬಿಜೈ, ವಾಮಂಜೂರು, ಕುಲಶೇಖರ, ಶಕ್ತಿನಗರ, ಲೇಡಿಹಿಲ್, ಅಶೋಕನಗರ, ಕೂಳೂರು ಚರ್ಚ್‌ಗಳಲ್ಲಿ ಎರಡರಿಂದ ಮೂರು ಬಲಿಪೂಜೆಗಳು ನಡೆದವು. ಕ್ರೈಸ್ತ ಬಂಧುಗಳು ಈಸ್ಟರ್ ಹಬ್ಬದ ಬಲಿಪೂಜೆಯಲ್ಲಿ ಭಾಗವಹಿಸಿ ಯೇಸುವಿನ ಪುನರುತ್ಥಾನದ ಸಂತಸವನ್ನು ಪರಸ್ಪರ ಹಂಚಿಕೊಂಡು ಶುಭಕೋರಿದರು.
ಫಾಸ್ಕಾ ಜಾಗರಣೆಯ ದಿನದಂದು ಆಶೀರ್ವಾದಗೊಂಡ ಪವಿತ್ರ ಜಲವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದರು. ತಮ್ಮ ಕುಟುಂಬದ ಸದಸ್ಯರ ಬದುಕಿನಲ್ಲಿ ನಾನಾ ಕಷ್ಟಗಳು ಬಂದಾಗ ಈ ಪವಿತ್ರ ಜಲವನ್ನು ಅವರಿಗೆ ಸಿಂಪಡಣೆ ಮಾಡುವ ಮೂಲಕ ದೇವರ ಆಸ್ತಿತ್ವವನ್ನು ಕಂಡುಕೊಳ್ಳುತ್ತಾರೆ. ಈ ಜಲದ ಮೂಲಕ ತಾವು ಪರಿಶುದ್ಧತೆಯನ್ನು ಪಡೆದುಕೊಳ್ಳುತ್ತೇವೆ ಎನ್ನುವ ನಂಬಿಕೆ ಕ್ರೈಸ್ತರಲ್ಲಿ ಇದೆ.
ನಗರದ ಕೆಲವೊಂದು ಚರ್ಚ್‌ಗಳಲ್ಲಿ ಈಸ್ಟರ್ ಫನ್ ಎನ್ನುವ ಕಾರ‌್ಯಕ್ರಮ ಆಯೋಜಿಸುವ ಮೂಲಕ ಸಂಗೀತ, ವಿವಿಧ ಸ್ಪರ್ಧೆ, ಆಹಾರ ವೈವಿಧ್ಯತೆಗಳ ಜತೆಯಲ್ಲಿ ಈಸ್ಟರ್ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.