ಜಮ್ಮು ಕಾಶ್ಮೀರ: ಪಾಕ್ ನ ಶಂಕಿತ ಒಳ ನುಸುಳುಕೋರನ ಗುಂಡಿಕ್ಕಿ ಹತ್ಯೆ

ಜಮ್ಮು ಕಾಶ್ಮೀರ, ಎ. 9: ಇಲ್ಲಿನ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖಯಲ್ಲೆ ರವಿವಾರ ಮುಂಜಾನೆ ಶಂಕಿತ ಭಯೋತ್ಪಾದಕರ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿರುವ ಸೇನಾ ಪಡೆ, ಮೂವರು ಪಾಕಿಸ್ತಾನಿ ಒಳ ನುಸುಳುಕೋರರ ಪೈಕಿ ಓರ್ವನನ್ನು ಗುಂಡಿಕ್ಕಿ ಹತ್ಯೆಗೈದಿದೆ.
ಮುಂಜಾನೆ ಸುಮಾರು 2.45ರ ವೇಳೆಗೆ ಶಹಾಪುರ ಸೆಕ್ಟರ್ನಲ್ಲಿ ಮೂವರು ಶಂಕಿತ ಭಯೋತ್ಪಾದಕರು ಒಳ ನುಸುಳಲು ಪ್ರಯತ್ನಿಸಿದರು. ಆಗ ಅಲ್ಲಿ ಗಸ್ತು ನಡೆಸುತ್ತಿದ್ದ ಸೇನಾ ಪಡೆ ಗುಂಡಿನ ದಾಳಿ ನಡೆಸುವ ಮೂಲಕ ಈ ಪ್ರಯತ್ನವನ್ನು ವಿಫಲಗೊಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಹಾಗೂ ರವಿವಾರದ ನಡುವಿನ ರಾತ್ರಿ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಅನುಮಾನಾಸ್ಪದ ಚಲನವಲನಗಳು ಕಂಡು ಬಂದಿದ್ದು, ಶಂಕಿತ ಭಯೋತ್ಪಾದಕರು ಒಳ ನುಸುಳುವ ಪ್ರಯತ್ನ ಮಾಡಿದ್ದರು. ತತ್ಕ್ಷಣ ಕಾರ್ಯಕ್ರವೃತ್ತವಾದ ಸೇನಾ ಪಡೆ ಗುಂಡಿನ ದಾಳಿ ನಡೆಸಿದೆ ಎಂದು ಜಮ್ಮು ಮೂಲದ ಸೇನಾ ಪಡೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಸೇನಾಪಡೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಓರ್ವ ನುಸುಳುಕೋರ ಗುಂಡಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಉಳಿದ ಶಂಕಿತ ಉಗ್ರರು ಅರಣ್ಯದೊಳಗೆ ಪಲಾಯನಗೈದಿರುವ ಸಾಧ್ಯತೆ ಇದೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.







